ದೇವರ ಸ್ವಂತ ನಾಡು ಎಂದು ಕರೆಯಲ್ಪಡುವ ಕೇರಳ ಪ್ರವಾಸಿಗರ ಸ್ವರ್ಗ. ಇಲ್ಲಿನ ಪ್ರಕೃತಿ ಸೌಂದರ್ಯ, ಬೀಚ್ ತೆಂಗಿನ ಮರ, ತೇಲುವ ಹೋಟೆಲ್, ದೇವಾಲಯಗಳು ಪ್ರವಾಸಿಗರನ್ನು ಭಕ್ತರನ್ನು ಸೆಳೆಯುತ್ತವೆ.
ಕೇರಳದ ತ್ರಿಶೂರ್ ಜಿಲ್ಲೆಯ ಗುರುವಾಯೂರು ಪವಿತ್ರ ಕ್ಷೇತ್ರವಾಗಿದ್ದು, ಇದನ್ನು ಗುರುಪಾವನಪುರಿ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಶ್ರೀಕೃಷ್ಣನ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಯಾವಾಗಲೂ ಹೆಚ್ಚಿರುತ್ತದೆ.
ಭಕ್ತಾದಿಗಳ ಸಂಖ್ಯೆಯ ದೃಷ್ಟಿಯಿಂದ ಭಾರತದ 4 ನೇ ದೊಡ್ಡ ದೇವಾಲಯ ಎಂದೂ ಹೇಳಲಾಗುತ್ತದೆ. ಗುರುವಾಯೂರು ಶ್ರೀಕೃಷ್ಣ ದೇವಾಲಯ ಪ್ರಮುಖ ಯಾತ್ರಾ ಸ್ಥಳವಾಗಿದೆ. ಇಲ್ಲಿನ ಶ್ರೀ ಕೃಷ್ಣ ವಿಗ್ರಹದ 4 ಕೈಗಳಲ್ಲಿ ಪಾಂಚಜನ್ಯ ಶಂಖ, ಸುದರ್ಶನ ಚಕ್ರ, ಗದೆ, ತುಳಸಿ ಮಾಲೆ, ಕಮಲಗಳಿವೆ.
ಗುರುವಾಯೂರಪ್ಪನ ದರ್ಶನ ಪಡೆದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದ್ದು, ಸದಾಕಾಲ ಭಕ್ತರು ಆಗಮಿಸುತ್ತಾರೆ. ವಿಶೇಷ ದಿನಗಳಲ್ಲಿ ಗುರುವಾಯೂರಪ್ಪನ ಸನ್ನಿಧಿಯಲ್ಲಿ ವಿಶೇಷ ಪೂಜೆ ಉತ್ಸವಗಳು ನಡೆಯುತ್ತವೆ. ಇಂತಹ ಸಂದರ್ಭದಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿರುತ್ತದೆ.
ಇನ್ನು ಪುರಾಣಗಳಲ್ಲಿಯೂ ಗುರುವಾಯೂರು ಕ್ಷೇತ್ರದ ಬಗ್ಗೆ ಪ್ರಸ್ತಾಪವಿದೆ. ಗುರು ಮತ್ತು ವಾಯು ಶ್ರೀಕೃಷ್ಣನನ್ನು ಪೂಜಿಸಿದ ಸ್ಥಳ ಇದೆಂದು ಹೇಳಲಾಗಿದೆ.
ಕೊಚ್ಚಿನ್ ನಿಂದ ಸುಮಾರು 80 ಕಿಲೋ ಮೀಟರ್, ತ್ರಿಶೂರ್ ನಿಂದ ಸುಮಾರು 33 ಕಿಲೋ ಮೀಟರ್ ದೂರದಲ್ಲಿರುವ ಗುರುವಾಯೂರು ಸುತ್ತಮುತ್ತ ಅನೇಕ ಸ್ಥಳಗಳಿವೆ. ಪುನ್ನತ್ತೂರು ಕೊಟ್ಟದಲ್ಲಿ ಆನೆಗಳ ಬಿಡಾರವಿದೆ. ಅಲ್ಲದೇ ಶಿವನ ದೇವಾಲಯ ಕೂಡ ಇದೆ. ಸಮೀಪದಲ್ಲೇ ಚೊವಲೂರು ಬೀಚ್ ಕೂಡ ಇದ್ದು, ಮಾಹಿತಿ ಪಡೆದುಕೊಂಡು ಹೋಗಿಬನ್ನಿ.