ತೆಲಂಗಾಣ: ಬೇರೆಯವರ ಎತ್ತುಗಳು ತನ್ನ ಹೊಲಕ್ಕೆ ನುಗ್ಗಿ ಮೇಯ್ದ ಕಾರಣಕ್ಕೆ ಎತ್ತುಗಳ ಮಾಲೀಕನನ್ನು ವ್ಯಕ್ತಿಯೋರ್ವ ತನ್ನ ಮನೆಯ ಮುಂದಿನ ಕಂಬಕ್ಕೆ ಕಟ್ಟಿ ಹಾಕಿರುವ ಘಟನೆ ತೆಲಂಗಾಣದ ಕೋಟಪಲ್ಲಿಯಲ್ಲಿ ನಡೆದಿದೆ.
ಶಟ್ಪಲ್ಲಿ ಗ್ರಾಮದ ನಿವಾಸಿ ದುರ್ಗಂ ಬಾಪು ಪ್ರತಿದಿನ ಎತ್ತುಗಳನ್ನು ಮೇಯಿಸಲು ತೆರಳುತ್ತಿದ್ದರು. ಈ ವೇಳೆ ಅದೇ ಗ್ರಾಮದ ನಿವಾಸಿ ರಾಂ ರೆಡ್ಡಿ ಎಂಬುವವರ ಹೊಲಕ್ಕೆ ನುಗ್ಗಿದ ಎತ್ತುಗಳು ಹೊಲದಲ್ಲಿದ್ದ ಬೆಳೆಗಳನ್ನು ನಾಶ ಮಾಡಿವೆ. ವಿಷಯ ತಿಳಿಯುತ್ತಿದ್ದಂತೆ ಕೋಪೋದ್ರಿಕ್ತನಾದ ರಾಂ ರೆಡ್ಡಿ, ಎತ್ತುಗಳನ್ನು ಹಿಡಿದು ತನ್ನ ಮನೆಯ ಮುಂದೆ ಕಟ್ಟಿ ಹಾಕಿದ್ದಾರೆ.
ರಾಂ ರೆಡ್ಡಿ ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು ದುರ್ಗಂ ಬಾಪು ಎತ್ತುಗಳನ್ನು ಬಿಡಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ರಾಂ ರೆಡ್ಡಿ, ದುರ್ಗಂ ಬಾಪುಗೆ ಎದುರಾಗಿದ್ದಾರೆ. ತಾನಿಲ್ಲದ ವೇಳೆ ಎತ್ತುಗಳನ್ನು ಬಿಡಿಸಿಕೊಂಡು ಹೋಗುತ್ತಿರುವುದನ್ನು ಕಂಡು ರಾಂ ರೆಡ್ಡಿ ಕೋಪ ನೆತ್ತಿಗೇರಿದೆ. ಇಬ್ಬರ ನಡುವೆ ಜಗಳ ಆರಂಭವಾಗಿದೆ. ಈ ವೇಳೆ ಎತ್ತುಗಳನ್ನು ಬಿಟ್ಟು ಕಳುಹಿಸಿದ ರಾಂ ರೆಡ್ಡಿ, ಎತ್ತುಗಳ ಮಾಲೀಕ ದುರ್ಗಂ ಬಾಪುನನ್ನು ಹಿಡಿದುಕೊಂಡಿದ್ದಾರೆ. ಅಷ್ಟೇ ಅಲ್ಲ ತನ್ನ ಮನೆಯ ಮುಂದೆ ಇರುವ ಕಂಬಕ್ಕೆ ಕಟ್ಟಿಹಾಕಿದ್ದಾರೆ.
ಇದೀಗ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ರಾಂ ರೆಡ್ಡಿ ವಿರುದ್ಧ ದುರ್ಗಂ ಬಾಪು ದೂರು ನೀಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ತನಿಖೆ ಆರಂಭವಾಗಿದೆ.