ನವರಾತ್ರಿಯಲ್ಲಿ ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತವೆ. ಬಿಕನೇರ್ ಬಳಿಯ ದೇಶ್ನೋಕೆಯಲ್ಲಿರುವ ವಿಶ್ವವಿಖ್ಯಾತ ಕರ್ಣಿ ಮಾತಾ ದೇವಸ್ಥಾನದಲ್ಲೂ ಭಕ್ತರದ್ದೇ ದಂಡು. ಇಲಿಗಳ ದೇವಾಲಯವೆಂದೇ ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ ದೇವಸ್ಥಾನವಿದು. ಕರ್ಣಿ ಮಾತೆ ಇಲ್ಲಿಗೆ ಬರುವ ಪ್ರತಿಯೊಬ್ಬ ಭಕ್ತನ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಎಂಬ ನಂಬಿಕೆ ಇದೆ.
ಈ ದೇವಾಲಯ ಸುಮಾರು 500 ವರ್ಷಗಳಷ್ಟು ಹಳೆಯದು. ದೇಶದಲ್ಲಿ ಪ್ಲೇಗ್‌ನಂತಹ ರೋಗ ಹರಡಿದಾಗ ಭೀಕರ ಕ್ಷಾಮ ಎದುರಾಗಿತ್ತು. ಆಗ ಕರ್ಣಿ ಮಾತೆ ತನ್ನ ಮಹಿಮೆಯಿಂದ ಪ್ಲೇಗ್ ರೋಗವನ್ನು ನಾಶಪಡಿಸಿದಳು ಎಂಬ ನಂಬಿಕೆ ಇದೆ. ಕರ್ಣಿ ಮಾತೆಯ ಮಹಿಮೆಯಿಂದಲೇ ಕ್ಷಾಮ ಕೂಡ ಪರಿಹಾರವಾಯಿತೆಂದು ಜನರು ನಂಬುತ್ತಾರೆ.
ಪ್ರತಿಯೊಂದು ವಿಪತ್ತನ್ನೂ ನಿವಾರಿಸುವ ದೇವತೆ ಈಕೆ. ಕರ್ಣಿ ಮಾತೆಯ ದೇವಸ್ಥಾನದಲ್ಲಿ ಎಲ್ಲೆಂದರಲ್ಲಿ ಇಲಿಗಳು ಓಡಾಡುತ್ತವೆ. ಈ ಇಲಿಗಳು ಕರ್ಣಿ ಮಾತೆಯ ಸಂತತಿಯಾಗಿದ್ದು, ಸತ್ತ ನಂತರವೂ ಯಮರಾಜ ಅವುಗಳನ್ನು ಕೊಂಡೊಯ್ಯುವುದಿಲ್ಲವಂತೆ. ಇಲಿಗಳ ರೂಪದಲ್ಲಿ ತಾಯಿಯ ಸೇವೆಯಲ್ಲಿ ಉಳಿಯುತ್ತವೆ ಎಂಬ ಪ್ರತೀತಿ ಇದೆ. ಈ ಇಲಿಗಳನ್ನು ಕಾಬಾ ಎಂದು ಕರೆಯಲಾಗುತ್ತದೆ.
ಇಲಿಗಳಿಗೆ ಮೊದಲ ಪ್ರಸಾದ…!
ದೇವಸ್ಥಾನದಲ್ಲಿ ತಯಾರಿಸಿದ ಪ್ರಸಾದವನ್ನು ಮಾತೆಗೆ ಅರ್ಪಿಸಿದ ನಂತರ ಈ ಇಲಿಗಳಿಗೆ ನೀಡಲಾಗುತ್ತದೆ. ಬಳಿಕ ಅದೇ ಅದೇ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಗುತ್ತದೆ. ಇಡೀ ದೇವಾಲಯವನ್ನು ನಿರ್ವಹಿಸುವ ತಾಯಿಯ ವಂಶಸ್ಥರನ್ನು ಚರಣ್ ಎಂದು ಕರೆಯಲಾಗುತ್ತದೆ. ಕರ್ಣಿ ಮಾತೆಯ ದರ್ಶನಕ್ಕಾಗಿ ಜನರು ದೂರದೂರುಗಳಿಂದ ಬರುತ್ತಾರೆ. ಮಾತೆಯ ಆಶೀರ್ವಾದ ಪಡೆದವರು ಮಾತ್ರ ಇಲ್ಲಿಗೆ ಬರಲು ಸಾಧ್ಯ ಎಂಬುದು ಎಲ್ಲರ ನಂಬಿಕೆ. ಭಕ್ತನ ಪ್ರತಿಯೊಂದು ಆಸೆಯನ್ನು ತಾಯಿ ಪೂರೈಸುತ್ತಾಳಂತೆ, ಭಕ್ತರನ್ನು ತನ್ನ ಶಕ್ತಿಯಿಂದಲೇ ಇಲ್ಲಿಗೆ ಕರೆಸಿಕೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ.