
ಒಂದೂವರೆ ಶತಮಾನಕ್ಕೂ ಹಳೆಯದಾದ ಭಾರತೀಯ ರೈಲ್ವೇ ತನ್ನೊಡಲಲ್ಲಿ ಅನೇಕ ವಿಸ್ಮಯಕಾರಿ ಸಂಗತಿಗಳನ್ನು ಒಳಗೊಂಡಿದೆ. ಜಗತ್ತಿನ ಅತಿ ದೊಡ್ಡ ರೈಲ್ವೇ ಜಾಲಗಳಲ್ಲಿ ಒಂದಾಗಿರುವ ಭಾರತೀಯ ರೈಲ್ವೇ, ಸ್ವಾತಂತ್ರ್ಯ ಬಂದು 76 ವರ್ಷಗಳಾಗುತ್ತಾ ಬಂದಿದ್ದರೂ ಸಹ ತನ್ನ ಒಂದು ಮಾರ್ಗವನ್ನು ಇನ್ನೂ ಬ್ರಿಟಿಷರ ಹಿಡಿತದಲ್ಲೇ ಕಾರ್ಯಾಚರಿಸುತ್ತಿದೆ.
ಮಹಾರಾಷ್ಟ್ರದ ಯಾವತ್ಮಾಲ್ ಹಾಗೂ ಮುರ್ತಿಜಾಪುರಗಳ ನಡುವಿನ 190ಕಿಮೀ ಉದ್ದದ ನ್ಯಾರೋ ಗೇಜ್ ಮಾರ್ಗವಿದ್ದು, ಇದನ್ನು ಶಾಕುಂತಲಾ ರೈಲ್ವೇ ಎಂದು ಕರೆಯಲಾಗುತ್ತದೆ. ಬ್ರಿಟಿಷ್ ರಾಜ್ ಕಾಲದಲ್ಲಿ ನಿರ್ಮಿಸಲಾದ ಈ ಮಾರ್ಗವನ್ನು ಅಂದಿನ ಕಾಲದಲ್ಲಿ ಕೇಂದ್ರ ಭಾರತದುದ್ದಕ್ಕೂ ಕಾರ್ಯ ನಿರ್ವಹಿಸುತ್ತಿದ್ದ ’ದಿ ಗ್ರೇಟ್ ಇಂಡಿಯನ್ ಪೆನೆನ್ಸುಲಾರ್ ರೈಲ್ವೇ’ ಕಾರ್ಯಾಚರಿಸುತ್ತಿತ್ತು.
ರೈಲ್ವೇ ಇಲಾಖೆಯನ್ನು 1952ರಲ್ಲೇ ರಾಷ್ಟ್ರೀಕರಣಗೊಳಿಸಿದರೂ ಸಹ ಇದೇ ಶಾಕುಂತಲಾ ರೈಲ್ವೇ ಮಾರ್ಗವನ್ನು ಆ ವೇಳೆ ನಿರ್ಲಕ್ಷಿಸಿದ ಕಾರಣ ಇಂದಿಗೂ ಈ ಮಾರ್ಗ ಅದೇ ಕಂಪನಿಯ ಮಾಲೀಕತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಮಾರ್ಗದಲ್ಲಿ ರೈಲುಗಳ ಓಡಾಟವನ್ನು ಮುಂದುವರೆಸಲು ಭಾರತೀಯ ರೈಲ್ವೇ ಇಂದಿಗೂ ಸಹ ಒಂದು ಕೋಟಿ ರೂಪಾಯಿಯಷ್ಟು ಬಾಡಿಗೆ ಕಟ್ಟುತ್ತಿದೆ.
1910ರಲ್ಲಿ ಕಿಲ್ಲಿಕ್-ನಿಕ್ಸನ್ ಎಂಬ ಖಾಸಗಿ ಸಂಸ್ಥೆಯು ಶಾಕುಂತಲಾ ರೈಲ್ವೇಯನ್ನು ಹುಟ್ಟುಹಾಕಿತ್ತು. ಈ ನ್ಯಾರೋ ಗೇಜ್ ಮಾರ್ಗದಲ್ಲಿ ಪ್ರತನಿತ್ಯ ಒಂದು ಪೂರ್ಣ ಟ್ರಿಪ್ ಅನ್ನು ಸಂಚರಿಸಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ಗ್ರಾಮಗಳಾದ ಯಾವತ್ಮಾಲ್ ಹಾಗೂ ಅಚಲ್ಪುರಗಳ ಜನರನ್ನು ಸಂಪರ್ಕಿಸಲು ಇಂದಿಗೂ ಸಹ ಈ ಮಾರ್ಗ ಜೀವನಾಡಿಯಾಗಿದೆ. ಈ ಗ್ರಾಮಗಳ ನಡುವೆ ಸಂಚರಿಸಲು 200 ರೂ. ತಗುಲುವ ಕಾರಣ ಈ ರೈಲು ಸೇವೆ ಇಂದಿಗೂ ಸಹ ಬಡಬಗ್ಗರಿಗೆ ವರದಾನವಾಗಿದೆ.
ಮ್ಯಾಂಚೆಸ್ಟರ್ನಲ್ಲಿ ಉತ್ಪಾದಿಸಲಾದ ಜ಼ಡ್ಡಿ ಸ್ಟೀಮ್ ಎಂಜಿನ್ ಈ ರೈಲನ್ನು 1923ರಿಂದ 1994ರವರೆಗೂ ಎಳೆದೊಯ್ಯುತ್ತಿತ್ತು. ಏಪ್ರಿಲ್ 15, 1994ರಿಂದ ಉಗಿಬಂಡಿಯ ಬದಲಿಗೆ ಡೀಸೆಲ್ ಚಾಲಿತ ಎಂಜಿನ್ ಕಾರ್ಯನಿರ್ವಹಿಸುತ್ತಿದೆ.
ಯಾವತ್ಮಾಲ್ನಿಂದ ಮುಂಬಯಿಗೆ ಹತ್ತಿ ರವಾನೆ ಮಾಡಲು ಈ ನ್ಯಾರೋ ಗೇಜ್ ರೈಲನ್ನು ಪರಿಚಯಿಸಲಾಗಿತ್ತು. ಈ ಹತ್ತಿಯು ಅಲ್ಲಿಂದ ಮ್ಯಾಂಚೆಸ್ಟರ್ಗೆ ಹಡಗಿನ ಮೂಲಕ ರವಾನೆಯಾಗುತ್ತಿತ್ತು. ಬಳಿಕ ಜನರನ್ನು ರವಾನೆ ಮಾಡಲು ಸಹ ಈ ಮಾರ್ಗವನ್ನು ಬಳಸಲು ಆರಂಭಿಸಲಾಯಿತು.
ಸಿಗ್ನಲಿಂಗ್, ಟಿಕೆಟ್ ಮಾರಾಟ, ಎಂಜಿನ್ಗಳ ಅಳವಡಿಕೆ ಸೇರಿದಂತೆ ಈ ರೈಲು ಸಂಚಾರದ ಕೆಲಸಗಳನ್ನು ನಿರ್ವಹಿಸಲು ಏಳು ಮಂದಿಯ ಸಿಬ್ಬಂದಿ ಬಲವಿದೆ. ಇದೇ ಮಾರ್ಗವನ್ನು ಬ್ರಾಡ್ಗೇಜ್ಗೆ ಪರರಿವರ್ತಿಸಲು ಸುರೇಶ್ ಪ್ರಭು ರೈಲ್ವೇ ಸಚಿವರಾಗಿದ್ದ ವೇಳೆ 1,500 ಕೋಟಿ ರೂ.ಗಳ ಯೋಜನೆಯೊಂದನ್ನು ಘೋಷಿಸಲಾಗಿದೆ.