ಭಾರತದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ದಿನದಿನಕ್ಕೂ ಹೆಚ್ಚಾಗ್ತಿದೆ. 2026 ರ ವೇಳೆಗೆ ಒಂದು ಬಿಲಿಯನ್ ಸ್ಮಾರ್ಟ್ಫೋನ್ ಬಳಕೆದಾರರನ್ನು ಭಾರತ ಹೊಂದಲಿದೆ ಎಂದು ಡೆಲಾಯ್ಟ್ ವರದಿಯಲ್ಲಿ ಹೇಳಲಾಗಿದೆ.
ಗ್ರಾಮೀಣ ಭಾಗದಲ್ಲಿ ಇಂಟರ್ ನೆಟ್ ಸೌಲಭ್ಯ ಸಿಗ್ತಿದೆ. ಇಂಟರ್ನೆಟ್ ಸೌಲಭ್ಯ ಸಿಗ್ತಿದ್ದಂತೆ ಜನರು ಮೊಬೈಲ್ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಹಾಗಾಗಿ ಸ್ಮಾರ್ಟ್ಫೋನ್ ಮಾರಾಟ ವೇಗವಾಗಿ ಹೆಚ್ಚಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
2021 ರಲ್ಲಿ 1.2 ಬಿಲಿಯನ್ ಮೊಬೈಲ್ ಫೋನ್ ಬಳಕೆದಾರರು ಭಾರತದಲ್ಲಿದ್ದಾರೆ. ಈ ಪೈಕಿ 750 ಮಿಲಿಯನ್ ಜನ ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ. ಅಂದಾಜಿನ ಪ್ರಕಾರ, ದೇಶೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ಫೋನ್ಗಳನ್ನು ಬಳಸುವ ಜನರ ಸಂಖ್ಯೆ 2026 ರ ವೇಳೆಗೆ ಒಂದು ಶತಕೋಟಿಗೆ ಹೆಚ್ಚಾಗುವ ನಿರೀಕ್ಷೆಯಿದೆ.
ಡೆಲಾಯ್ಟ್ ಪ್ರಕಾರ, 2021 ಮತ್ತು 2026 ರ ನಡುವೆ, ಗ್ರಾಮೀಣ ಪ್ರದೇಶಗಳಲ್ಲಿನ ಸ್ಮಾರ್ಟ್ಫೋನ್ ಗ್ರಾಹಕರ ಸಂಖ್ಯೆ ವಾರ್ಷಿಕ ಆಧಾರದ ಮೇಲೆ ಶೇಕಡಾ ಆರರ ದರದಲ್ಲಿ ಬೆಳೆಯಲಿದೆ. ನಗರ ಪ್ರದೇಶಗಳಲ್ಲಿ ವಾರ್ಷಿಕವಾಗಿ ಶೇಕಡಾ 2.5 ರಷ್ಟು ಹೆಚ್ಚಾಗಲಿದೆ. ಸ್ಮಾರ್ಟ್ಫೋನ್ ಬೇಡಿಕೆಯು ವರ್ಷದಿಂದ ವರ್ಷಕ್ಕೆ ಶೇಕಡಾ 6 ರಷ್ಟು ಹೆಚ್ಚಾಗುತ್ತಿದೆ.
ಸಮೀಕ್ಷೆ ಪ್ರಕಾರ, ಜನರು ಹೊರಗೆ ಹೋಗುವುದು, ಸ್ನೇಹಿತರ ಭೇಟಿ, ಮನೆ ಖರೀದಿಗಿಂತ ಹೆಚ್ಚಿನ ಮಹತ್ವವನ್ನು ಆನ್ಲೈನ್ ನಲ್ಲಿರುವುದಕ್ಕೆ ನೀಡ್ತಿದ್ದಾರೆ. 1997ರಿಂದ 2012ರಲ್ಲಿ ಜನಿಸಿದ ಯುವಕರಲ್ಲಿ ಇಂಟರ್ನೆಟ್ ಆಸಕ್ತಿ ಹೆಚ್ಚಿದೆ.