ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ (ಜೆಎಫ್ಎಸ್ಎಲ್) ತನ್ನ ಪೂರ್ಣ ಪ್ರಮಾಣದ ಜಿಯೋ ಫೈನಾನ್ಸ್ ಅಪ್ಲಿಕೇಷನ್ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ಹಿಂದೆಂದಿಗಿಂತಲೂ ಉತ್ತಮ ಹಣಕಾಸು ಸೇವೆಗಳನ್ನು ಒದಗಿಸಲು ಸಾಧ್ಯವಾಗಲಿದೆ.
ಜಿಯೋಫೈನಾನ್ಸ್ (JioFinance) ಅಪ್ಲಿಕೇಷನ್ನ ಬೀಟಾ ಆವೃತ್ತಿಯನ್ನು ಸುಮಾರು 4 ತಿಂಗಳ ಹಿಂದೆ, ಅಂದರೆ ಮೇ 30, 2024ರಂದು ಆರಂಭಿಸಲಾಯಿತು. ಅಂದಿನಿಂದ 60 ಲಕ್ಷ ಬಳಕೆದಾರರು ಇದನ್ನು ಡೌನ್ಲೋಡ್ ಮಾಡಿದ್ದಾರೆ. ಗ್ರಾಹಕರ ಪ್ರತಿಕ್ರಿಯೆಯನ್ನು ಆಧರಿಸಿ ಹೊಸ ಅಪ್ಲಿಕೇಷನ್ ಅಭಿವೃದ್ಧಿಪಡಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಹೊಸ ಅಪ್ಲಿಕೇಷನ್ ಅನ್ನು ಗೂಗಲ್ ಪ್ಲೇ ಸ್ಟೋರ್, ಆಪಲ್ ಆಪ್ ಸ್ಟೋರ್ ಮತ್ತು ಮೈಜಿಯೋ (MyJio)ನಿಂದ ಡೌನ್ಲೋಡ್ ಮಾಡಬಹುದು.
ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಕಂಪನಿಯು ತನ್ನ ಹಣಕಾಸಿನ ಉತ್ಪನ್ನ ಸರಪಳಿಗೆ ಅನೇಕ ಹೊಸ ಸೇವೆಗಳನ್ನು ಸೇರಿಸಿದೆ. ಇವುಗಳಲ್ಲಿ ಮ್ಯೂಚುವಲ್ ಫಂಡ್ಗಳ ಮೇಲಿನ ಸಾಲ, ಆಸ್ತಿಯ ಮೇಲಿನ ಸಾಲ, ಗೃಹ ಸಾಲ ಮತ್ತು ಗೃಹ ಸಾಲದ ಬಾಕಿಯ ವರ್ಗಾವಣೆಯೂ ಸೇರಿವೆ. ಹಣಕಾಸು ಮಾರುಕಟ್ಟೆಯಲ್ಲಿ ನೆಲೆಯನ್ನು ಸ್ಥಾಪಿಸಲು ಕಂಪನಿಯು ಸ್ಪರ್ಧಾತ್ಮಕ ದರಗಳಲ್ಲಿ ಸಾಲವನ್ನು ನೀಡುತ್ತದೆ.
ಕಂಪನಿಯ ಪ್ರಕಾರ, ಸುಮಾರು 15 ಲಕ್ಷ ಗ್ರಾಹಕರು ಜಿಯೋ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಜೆಪಿಬಿಎಲ್) ನಲ್ಲಿ ಉಳಿತಾಯ ಖಾತೆಗಳನ್ನು ತೆರೆದಿದ್ದಾರೆ. ಬ್ಯಾಂಕ್ನಲ್ಲಿ ಉಳಿತಾಯ ಖಾತೆಯನ್ನು ಕೇವಲ 5 ನಿಮಿಷಗಳಲ್ಲಿ ಡಿಜಿಟಲ್ ಆಗಿ ತೆರೆಯಬಹುದು. ಖಾತೆಯೊಂದಿಗೆ ಡೆಬಿಟ್ ಕಾರ್ಡ್ ಸಹ ಲಭ್ಯವಿರುತ್ತದೆ ಮತ್ತು ಬಯೋಮೆಟ್ರಿಕ್ ದೃಢೀಕರಣದಿಂದಾಗಿ, ಉಳಿತಾಯ ಖಾತೆಯು ಹೆಚ್ಚು ಸುರಕ್ಷಿತವಾಗಿರುತ್ತದೆ. ಇದರ ಜತೆಗೆ, ಯುಪಿಐ ಪಾವತಿ, ಮೊಬೈಲ್ ರೀಚಾರ್ಜ್ ಮತ್ತು ಕ್ರೆಡಿಟ್ ಕಾರ್ಡ್ ಬಿಲ್ಗಳ ಪಾವತಿಯಂತಹ ಸೇವೆಗಳು ಸಹ ಗ್ರಾಹಕರಿಗೆ ಲಭ್ಯವಿರುತ್ತವೆ.
ಜಿಯೋ ಫೈನಾನ್ಸ್ ಅಪ್ಲಿಕೇಷನ್ನಲ್ಲಿ ಗ್ರಾಹಕರ ವಿವಿಧ ಬ್ಯಾಂಕ್ ಖಾತೆಗಳು ಮತ್ತು ಮ್ಯೂಚುವಲ್ ಫಂಡ್ ಹೋಲ್ಡಿಂಗ್ಗಳನ್ನು ಸಹ ಜೋಡಣೆ ಮಾಡಬಹುದು. ಅಲ್ಲದೆ ಜಿಯೋ ಫೈನಾನ್ಸ್ ಅಪ್ಲಿಕೇಷನ್ ಜೀವ ವಿಮೆ, ದ್ವಿಚಕ್ರ ವಾಹನ ಮತ್ತು ಮೋಟಾರು ವಿಮೆ ಕ್ಷೇತ್ರದಲ್ಲಿ ಅನೇಕ ಸೇವೆಗಳನ್ನು ಸಹ ನೀಡುತ್ತದೆ. ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ (JFSL) ಸಹ ಗ್ರಾಹಕರಿಗೆ ವಿಶ್ವ ದರ್ಜೆಯ, ನವೀನ ಹೂಡಿಕೆ ಪರಿಹಾರಗಳನ್ನು ತರಲು ಅಂತಾರಾಷ್ಟ್ರೀಯ ಫಂಡ್ ಬ್ಲ್ಯಾಕ್ ರಾಕ್ (BlackRock) ಜೊತೆ ಕೆಲಸ ಮಾಡುತ್ತಿದೆ.