ಚಂದ್ರನ ಮೇಲೆ ಮಾನವರು ಇನ್ನೊಮ್ಮೆ ಕಾಲಿಡುವ ಮುನ್ನ ಅಲ್ಲಿ ಹೈ-ಸ್ಪೀಡ್ ವೈರ್‌ಲೆಸ್ ಸಂಪರ್ಕದ ಮೂಲ ಸೌಕರ್ಯಗಳನ್ನು ಸ್ಥಾಪಿಸಲು ಸಕಲ ಸಿದ್ಧತೆಗಳು ಜಾರಿಯಲ್ಲಿವೆ.
ಈ ಸಂಬಂಧ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹಾಗೂ ಫಿನ್ನಿಶ್ ಟೆಲಿಕಾಂ ದಿಗ್ಗಜ ನೋಕಿಯಾ ನಡುವೆ ಒಡಂಬಡಿಕೆಯಾಗಿದ್ದು, ಚಂದ್ರನ ಮೇಲೆ 4ಜಿ ಮೂಲ ಸೌಕರ್ಯ ಅಳವಡಿಸಲು 2020 ರಿಂದಲೂ ಕೆಲಸಗಳು ಸಾಗಿವೆ.
ಮಂಗಳನ ಅಂಗಳಕ್ಕೆ ಕಾಲಿಡುವ ಹಾದಿಯಲ್ಲಿನ ಸಿದ್ಧತೆಯ ಭಾಗವಾಗಿಯೂ ಸಹ ಚಂದ್ರನ ಅಂಗಳಕ್ಕೆ ಕಾಲಿಡಲಿದ್ದಾರೆ ಮಾನವರು. ಈ ಸಂಪರ್ಕ ಸಾಧನಗಳು 2023 ರಿಂದಲೇ ಚಂದ್ರನ ಅಂಗಳದಲ್ಲಿ ಕೆಲಸ ಮಾಡಲಿವೆ ಎಂದು ತಿಳಿಸಲಾಗಿದೆ. ಆದರೆ 2025ರಲ್ಲಿ ಗಗನಯಾನಿಗಳು ಚಂದ್ರನ ಅಂಗಳದ ಮೇಲೆ ಕಾಲಿಟ್ಟ ಬಳಿಕವಷ್ಟೇ ಈ ಸಾಧನಗಳ ಅಧಿಕೃತ ಕಾರ್ಯಾರಂಭವಾಗಲಿದೆ.
ತನ್ನ ಎಲ್‌ಟಿಇ ಸಂಪರ್ಕ ಜಾಲಗಳು ಭೂಮಿಯ ಮೇಲಿನಂತೆ ಚಂದ್ರನ ಮೇಲೂ ಕೆಲಸ ಮಾಡುವಂತೆ ಸಾಬೀತು ಪಡಿಸುವ ಸವಾಲು ಈಗ ನೋಕಿಯಾ ಮುಂದೆ ಇದೆ. ಈ ಸಂಬಂಧ ಅಗತ್ಯ ಉಪಕರಣಗಳನ್ನು ಸ್ಪೇಸ್‌ಎಕ್ಸ್ ಗಗನ ನೌಕೆಯಲ್ಲಿ ಕಳುಹಿಸಲಾಗುವುದು. ಬಳಿಕ ತಳಪಾಯ ನಿಲ್ದಾಣವನ್ನು ಲ್ಯಾಂಡರ್ ಒಂದರ ನೆರವಿನಿಂದ ಅಲ್ಲಿಗೆ ಕಳುಹಿಸಲಾಗುವುದು. ರೋವರ್ ಒಂದನ್ನು ಸಹ ಚಂದ್ರನಲ್ಲಿಗೆ ಕಳುಹಿಸಲಾಗುವುದು.
ನಿಲ್ದಾಣ ಹಾಗೂ ರೋವರ್‌ಗಳ ನಡುವೆ ಸಂಪರ್ಕ ಸಾಧಿಸಿದ ಕೂಡಲೇ ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತಿದೆ ಎಂದು ಖಾತ್ರಿ ಮಾಡಿಕೊಳ್ಳಲಾಗುವುದು. ಚಂದ್ರನ ಮೇಲಿನ ವಾತಾವರಣದ ವೈಪರಿತ್ಯಗಳನ್ನು ನಿಭಾಯಿಸುವಷ್ಟು ಕ್ಷಮತೆ ಇರುವಂತೆ ಈ ಮೂಲ ಸೌಕರ್ಯಗಳ ಅಭಿವೃದ್ಧಿ ಮಾಡಲಾಗುತ್ತಿದೆ.