ಸುಂದರವಾದ ತ್ವಚೆ, ದಟ್ಟವಾದ ಕೂದಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಇವುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದ್ರೆ ಮಾತ್ರ ಇದನ್ನು ಪಡೆದುಕೊಳ್ಳಲು ಸಾಧ್ಯ. ಹಾಗಂತ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಮಿಕಲ್‌ಯುಕ್ತ ಪದಾರ್ಥಗಳನ್ನು ಚರ್ಮ ಮತ್ತು ಕೂದಲಿನ ಆರೈಕೆಗೆ ಬಳಸಬೇಡಿ. ಅವು ನಿಮ್ಮ ತ್ವಚೆ ಹಾಗೂ ಕೂದಲಿಗೆ ಹಾನಿಕಾರಕವಾಗಬಹುದು. ಸ್ನಾನದ ನಂತರ ನಮ್ಮ ಕೆಲವೊಂದು ಅಭ್ಯಾಸಗಳು ಕೂಡ ತ್ವಚೆ ಮತ್ತು ಕೇಶ ಸೌಂದರ್ಯಕ್ಕೆ ಮಾರಕವಾಗಬಹುದು.
ಮುಖದ ಮೇಲೆ ಟವೆಲ್ ಉಜ್ಜುವುದು: ಸ್ನಾನದ ನಂತರ ಮೈ ಒರೆಸಿಕೊಳ್ಳೋದು ಸಾಮಾನ್ಯ. ಅದೇ ರೀತಿ ಟವೆಲ್‌ನಿಂದ ಮುಖವನ್ನೂ ಒರೆಸಿಕೊಳ್ಳುತ್ತೇವೆ. ಆದ್ರೆ ಸ್ನಾನದ ನಂತರ ಟವೆಲ್‌ನಿಂದ ಮುಖವನ್ನು ಉಜ್ಜಬಾರದು. ಈ ರೀತಿ ಮಾಡುವುದರಿಂದ ನಿಮ್ಮ ಮುಖದ ಚರ್ಮ ಹಾನಿಗೀಡಾಗುತ್ತದೆ. ಟವೆಲ್‌ನಿಂದ ಉಜ್ಜುವ ಬದಲು ಹಾಗೇ ಒಣಗಲು ಬಿಡಿ.
ಒದ್ದೆಯಾದ ಕೂದಲನ್ನು ಬಾಚಿಕೊಳ್ಳುವುದು: ತಲೆ ಸ್ನಾನ ಮಾಡಿದ ನಂತರ ಒದ್ದೆ ಕೂದಲನ್ನು ಅಪ್ಪಿತಪ್ಪಿಯೂ ಬಾಚಬೇಡಿ. ಒದ್ದೆಯಾದ ಕೂದಲು ದುರ್ಬಲವಾಗಿರುತ್ತದೆ, ಆಗ ನೀವು ಬಾಚಿಕೊಂಡರೆ ಕೂದಲು ಉದುರಿ ಹೋಗುತ್ತದೆ. ಕೂದಲು ನೈಸರ್ಗಿಕ ರೀತಿಯಲ್ಲಿ ಒಣಗಲು ಬಿಡಿ.
ಹಾನಿಕಾರಕ ಕ್ರೀಮ್ ಬಳಕೆ ಬೇಡ : ಸ್ನಾನದ ನಂತರ ಸಾಮಾನ್ಯವಾಗಿ ಎಲ್ಲರೂ ಮುಖಕ್ಕೆ ಕ್ರೀಮ್ ಹಚ್ಚಿಕೊಳ್ಳುತ್ತಾರೆ. ಆದ್ರೆ ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರುವ ಕ್ರೀಮ್‌ಗಳನ್ನು ಹಚ್ಚಬೇಡಿ. ಮಾರುಕಟ್ಟೆಯಲ್ಲಿ ಹಲವು ಬಗೆಯ ಕ್ರೀಮ್ ಗಳು, ಮಾಯಿಶ್ಚರೈಸರ್ ಗಳು ಲಭ್ಯವಿದ್ದರೂ ಅದರಲ್ಲಿ ಕೆಮಿಕಲ್ ಪ್ರಮಾಣ ಕಡಿಮೆ ಇರುವ, ತ್ವಚೆಗೆ ಹಾನಿಕಾರಕವಲ್ಲದ ಕ್ರೀಮ್ ಅನ್ನೇ ಆಯ್ದುಕೊಳ್ಳಿ. ಅದರ ಬದಲಾಗಿ ಹಾಲಿನ ಕೆನೆ ಮತ್ತು ಮಾಯಿಶ್ಚರೈಸರ್ ಜೊತೆಗೆ ತೈಲವನ್ನು ಸಹ ಬಳಸಬಹುದು. ಇದು ನಿಮ್ಮ ಚರ್ಮಕ್ಕೆ ಹಾನಿ ಮಾಡುವುದಿಲ್ಲ.