ಕಲಬುರಗಿ : ಸಿಎಂ ಸಿದ್ದರಾಮಯ್ಯಗೆ ಬರೆದಿರುವ ಪತ್ರ ನಕಲಿ ಎಂದು ಕಾಂಗ್ರೆಸ್ ಶಾಸಕ ಬಿ. ಆರ್ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಕಾಂಗ್ರೆಸ್ ಶಾಸಕ ಬಿ. ಆರ್ ಪಾಟೀಲ್ ‘ ಇದು ನನ್ನ ಹಳೆಯ ಲೆಟರ್ ಹೆಡ್, ಈ ಹಿಂದೆ ನಾನು ಶಾಸಕನಾಗಿದ್ದಾಗ ಬಳಸಿದ ಲೆಟರ್ ಹೆಡ್ ನ್ನು ಬಳಕೆ ಮಾಡಲಾಗಿದೆ. ನನ್ನ ಹಳೆಯ ಲೆಟರ್ ಹೆಡ್ ಬಳಸಿ ಪತ್ರ ವೈರಲ್ ಮಾಡಿದ್ದಾರೆ. ವೈರಲ್ ಆಗಿರುವ ಪತ್ರದಲ್ಲಿ ಶಾಂತಿನಗರದ ಮನೆಯ ಹೆಸರಿದೆ. ಹೊಸ ಲೆಟರ್ ಹೆಡ್ ನಲ್ಲಿ ಅಕ್ಕಮಹಾದೇವಿ ಕಾಲೋನಿ ನಿವಾಸದ ಹೆಸರಿದೆ ಎಂದು ಕಾಂಗ್ರೆಸ್ ಶಾಸಕ ಬಿ. ಆರ್ ಪಾಟೀಲ್ ಹೇಳಿದ್ದಾರೆ.
ನಮ್ಮಲ್ಲಿ ಸಂಘರ್ಷವಿಲ್ಲ, ಸಂವಹನದ ಕೊರತೆ ಇರಬಹುದು : ಶಾಸಕ ಬಸವರಾಜ್ ರಾಯರೆಡ್ಡಿ
ನಾವು ಸರ್ಕಾರದ ವಿರುದ್ದ ಅಥವಾ ಪಕ್ಷದ ವಿರುದ್ಧ ಪತ್ರ ಬರೆದಿಲ್ಲ. ಶಾಸಕಾಂಗ ಸಭೆ ಕರೆದರೆ ಎಲ್ಲವೂ ಸರಿ ಹೋಗುತ್ತದೆ. ಹಾಗಾಗಿ ಸಭೆ ಕರೆಯುವಂತೆ ಹೇಳಿದ್ದೇವೆ ಎಂದು ಶಾಸಕ ಬಸವರಾಜ್ ರಾಯರೆಡ್ಡಿ ತಿಳಿಸಿದ್ದಾರೆ.ವಿಜಯನಗರದಲ್ಲಿ ಮಾತನಾಡಿದ ಶಾಸಕ ರಾಯರೆಡ್ಡಿ, ಸರ್ಕಾರದ ಬಗ್ಗೆ ನಮಗೆ ಯಾವುದೇ ಅಸಮಾಧಾನವಿಲ್ಲ, ನಾವು ಸರ್ಕಾರ ಅಥವಾ ಪಕ್ಷದ ವಿರುದ್ಧ ಪತ್ರ ಬರೆದಿಲ್ಲ. ನಮ್ಮಲ್ಲಿ ಯಾವ ಸಂಘರ್ಷವೂ ಇಲ್ಲ. ಸಂವಹನದ ಕೊರತೆ ಇರಬಹುದು ಅಷ್ಟೇ. ಶಾಸಕಾಂಗ ಸಭೆ ಕರೆದು ಮಾತನಾಡಿದರೆ ಎಲ್ಲವೂ ಸರಿ ಹೋಗುತ್ತದೆ. ನಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಸಿಗುತ್ತದೆ ಎಂದು ಹೇಳಿದ್ದಾರೆ.
ನಾವಿನ್ನೂ ಕೆಲ ಸಚಿವರನ್ನು ಬೇಟಿಯಾಗಿಲ್ಲ. ಎಲ್ಲರೊಂದಿಗೂ ಮಾತನಾಡಬೇಕು. ಆ ನಿಟ್ಟಿನಲ್ಲಿ ಶಾಸಕಾಂಗ ಸಭೆ ಕರೆಯಬೇಕು. ಬಿ.ಕೆ ಹರಿಪ್ರಸಾದ್ ಹೇಳಿಕೆಗೂ ನಮ್ಮ ಪತ್ರಕ್ಕೂ ಯಾವುದೇ ಸಂಬಂಧವಿಲ್ಲ. ಸಿಎಂ ಸಿದ್ದರಾಮಯ್ಯ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಇದಕ್ಕಿಂತ ಉತ್ತಮ ಸರ್ಕಾರ ನಡೆಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ದೇಶದಲ್ಲೇ ನಂಬರ್ 1 ಸಿಎಂ ಎಂದು ಹೇಳಿದರು.
ಬರೀ ಊಹಾಪೋಹದ ಸುದ್ದಿ…. ಯಾರೂ ಪತ್ರ ಬರೆದಿಲ್ಲ ಎಂದ ಡಿಸಿಎಂ
ರಾಜ್ಯ ಸರ್ಕಾರದಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಸಚಿವರುಗಳ ವಿರುದ್ಧ ಶಾಸಕರು ಪತ್ರ ಬರೆದು ದೂರು ನೀಡಿದ್ದಾರೆ ಎಂಬ ವಿಚಾರವನ್ನು ಅಲ್ಲಗಳೆದಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಎಲ್ಲರೂ ಅವರವರ ಕ್ಷೇತ್ರಗಳಲ್ಲಿ ಕೆಲಸ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಯಾರೂ ಯಾವ ಪತ್ರವನ್ನೂ ಬರೆದಿಲ್ಲ, ಯಾವ ಅಸಮಾಧಾನವೂ ಇಲ್ಲ, ಎಲ್ಲಾ ಊಹಾಪೋಹದ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದರು.
ನಮ್ಮ 5 ಗ್ಯಾರಂಟಿ ಕಾರ್ಯಕ್ರಮಗಳನ್ನು ಜನರಿಗೆ ಯಾವ ರೀತಿ ತಲುಪಿಸುತ್ತಿದ್ದೇವೆ ಎಂಬ ಬಗ್ಗೆ ಶಾಸಕರಿಗೆ ಗೈಡ್ ಲೈನ್ಸ್ ಕೊಡಬೇಕಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗೂ ನಮ್ಮ ಯೋಜನೆ ತಲುಪಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಇನ್ನು ಎಲ್ಲಾ ಸಚಿವರು ಶಾಸಕರಿಗೆ ಸ್ಪಂದಿಸುತ್ತಿದ್ದಾರೆ. ಯಾವ ದೂರು ಯಾರಿಂದಲೂ ಬಂದಿಲ್ಲ. ಹೆಚ್ಚಿನ ಅನುದಾನದ ಬಗ್ಗೆ ಈ ವರ್ಷ ಸ್ವಲ್ಪ ಕಾಯುವಂತೆ ಹೇಳಿದ್ದೇವೆ ಎಂದರು.