ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಸಾಕ್ಷ್ಯಗಳ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿರುವ ಬೆನ್ನಲ್ಲೇ ಎಸ್ಐಟಿ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದೆ. ನೂರಾರು ಮಂದಿ ರ್ಯಾಲಿಯಲ್ಲಿ ಭಾಗಿಯಾಗಿದ್ದರೂ ಸಹ ಬೆರಳಣಿಕೆಯ ಸಾಕ್ಷ್ಯಗಳನ್ನು ಮಾತ್ರ ಕೋರ್ಟ್ ಮುಂದೆ ಹಾಜರುಪಡಿಸಿದ್ದು ಏಕೆ ಎಂದು ಸುಪ್ರೀಂಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಪ್ರಶ್ನೆ ಮಾಡಿತ್ತು.
ತನಿಖೆಯ ಮುಂದುವರಿದ ಭಾಗವಾಗಿ ಎಸ್ಐಟಿ ಇಂದು ಪ್ರಕರಣ ಸಂಬಂಧ ಯಾರೆಲ್ಲ ಮುಂದೆ ಬಂದು ಹೇಳಿಕೆಗಳನ್ನು ನೀಡಿದ್ದಾರೆ ಹಾಗೂ ಡಿಜಿಟಲ್ ಸಾಕ್ಷ್ಯಗಳನ್ನು ಒದಗಿಸಿದ್ದಾರೋ ಆ ಎಲ್ಲ ಪ್ರತ್ಯಕ್ಷದರ್ಶಿಗಳ ಮೊಬೈಲ್ ಸಂಖ್ಯೆಯನ್ನು ಹಾಗೂ ವಿಳಾಸವನ್ನು ರಿಲೀಸ್ ಮಾಡಿದೆ. ಅಲ್ಲದೇ ಯಾರು ತಮ್ಮ ವಿವರಗಳು ನಿಗೂಢವಾಗಿ ಇರಲಿ ಎಂದು ಹೇಳಿದ್ದಾರೋ ಆ ಎಲ್ಲಾ ಪ್ರತ್ಯಕ್ಷದರ್ಶಿಗಳ ವಿವರಗಳನ್ನು ಗೌಪ್ಯವಾಗಿ ಇಟ್ಟಿರುವುದಾಗಿಯೂ ಇದೇ ವೇಳೆ ಮಾಹಿತಿ ನೀಡಿದೆ.
ಏನಿದು ಪ್ರಕರಣ..?
ಉತ್ತರಪ್ರದೇಶದ ಲಖೀಂಪುರ ಖೇರಿ ಎಂಬಲ್ಲಿ ಅಕ್ಟೋಬರ್ 3ರಂದು ಹಿಂಸಾಚಾರ ಸಂಭವಿಸಿತ್ತು. ಈ ಹಿಂಸಾಚಾರದಲ್ಲಿ ಓರ್ವ ಪತ್ರಕರ್ತ ಸೇರಿದಂತೆ 8 ಮಂದಿ ಸಾವಿಗೀಡಾಗಿದ್ದರು. ಈ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ವಿರುದ್ಧ ರೈತರ ಮೇಲೆ ಕಾರು ಹರಿಸಿದ್ದ ಆರೋಪ ಎದುರಾಗಿತ್ತು.