alex Certify ‘ಕೆಂಪೇಗೌಡರು ಯಾವುದೇ ಜಾತಿಗೆ ಸೀಮಿತವಾದವರಲ್ಲ’ ; ಸಿಎಂ ಸಿದ್ದರಾಮಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೆಂಪೇಗೌಡರು ಯಾವುದೇ ಜಾತಿಗೆ ಸೀಮಿತವಾದವರಲ್ಲ’ ; ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಕೆಂಪೇಗೌಡರು ಯಾವುದೇ ಜಾತಿಗೆ ಸೀಮಿತವಾದವರಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಇಂದು ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು.

ಕೆಂಪೇಗೌಡರು ಯಾವುದೇ ಜಾತಿಗೆ ಸೀಮಿತವಾದವರಲ್ಲ. ಅವರು ಜಾತ್ಯಾತೀತರಾಗಿ ಬದುಕಿದಂತೆ ಸಮಾಜದ ಎಲ್ಲಾ ಜನರು ಬದುಕಿ ಅವರನ್ನು ಸ್ಮರಿಸಬೇಕು. ನಾಡಿನಲ್ಲಿ ಕೆಂಪೇಗೌಡರ ಜಯಂತಿ ಆಚರಿಸಿ ಸಂಭ್ರಮಿಸುವುದಕ್ಕಷ್ಟೇ ಸೀಮಿತವಾಗಬಾರದು. ಕೆಂಪೇಗೌಡರು ಸಮಾಜಮುಖಿಯಾಗಿ ಕೆಲಸ ಮಾಡಿದಂತೆ ಪ್ರತಿಯೊಬ್ಬರೂ ಸಮಾಜಮುಖಿಯಾಗಿ, ವಿಶ್ವಮಾನವರಾಗಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇದು ಅವರ ಜಯಂತಿ ಆಚರಣೆಯ ನೈಜ ಆಶಯವಾಗಿದೆ.

ಕೆಂಪೇಗೌಡರು ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು. ಅವರು ಈ ನಾಡಿನ ದೊರೆಯಾಗಿ ಮಾದರಿ ಆಡಳಿತವನ್ನು ನೀಡಿದ್ದರು. ರೈತ ಸಮುದಾಯದಲ್ಲಿ ಜನಿಸಿದ್ದರೂ ಕೂಡ ಅವರ ಆಡಳಿತದ ಅವಧಿಯಲ್ಲಿ ಜಾತಿ, ಧರ್ಮ ಎಂದು ವಿಂಗಡನೆ ಮಾಡಲಿಲ್ಲ. ಎಲ್ಲಾ ಜನಾಂಗ, ಜಾತಿಯವರನ್ನು ಅಭಿವೃದ್ಧಿಗೊಳಿಸಲು ಪ್ರಯತ್ನಿಸಿದರು. ಅವರ ಆಡಳಿತ ಕಾಲದಲ್ಲಿ ಅವರು ಕೈಗೊಂಡ ಅಭಿವೃದ್ಧಿಯನ್ನು ನೋಡಿದರೆ ಅವರೊಬ್ಬ ಜಾತ್ಯತೀತ ವ್ಯಕ್ತಿಯಾಗಿದ್ದರು ಎಂದು ತಿಳಿಯುತ್ತದೆ. ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿ ಮಾಡಲಾರರು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದರು. ಇತಿಹಾಸವನ್ನು ಅರಿತು ತಪ್ಪುಗಳನ್ನು ತಿದ್ದಿಕೊಂಡು ಮನುಷ್ಯರಾಗಿ ಬಾಳುವ ಪ್ರಯತ್ನ ಮಾಡಬೇಕು. ಸಮಾಜದಲ್ಲಿ ಬೇರೆ ಬೇರೆ ಜಾತಿ, ಧರ್ಮಗಳಿದ್ದರೂ ಮಾನವರಾಗಿ ಬದುಕಬೇಕು. ಕೆಂಪೇಗೌಡರು ಅವರ ಆಡಳಿತಾವಧಿಯಲ್ಲಿ ಜಾತಿ ತಾರತಮ್ಯ ಮಾಡಲಿಲ್ಲ. ಬೆಂಗಳೂರು ಈ ಮಟ್ಟಕ್ಕೆ ಬೆಳೆದಿದ್ದರೆ ಅದಕ್ಕೆ ಕೆಂಪೇಗೌಡರು ಕಾರಣ. ದೂರದೃಷ್ಟಿ ಇಟ್ಟುಕೊಂಡು ಆರ್ಥಿಕ, ಸಾಮಾಜಿಕ ಬೆಳವಣಿಗೆ ಯಾವ ರೀತಿಯಾಗಬೇಕೆಂದು ಅರಿತು, ಎಲ್ಲರಿಗೂ ಆರ್ಥಿಕ ಸಾಮಾಜಿಕ ಶಕ್ತಿಯನ್ನು ತುಂಬುವ ಪ್ರಯತ್ನವನ್ನು ಅವರು ಮಾಡಿದ್ದರು ಎಂದರು.

ಬೆಂಗಳೂರಿನಲ್ಲಿ ಯಾವುದೇ ಪ್ರಮುಖ ನದಿಗಳಿಲ್ಲವಾದರೂ ಅನೇಕ ನದಿಗಳನ್ನು ನಿರ್ಮಿಸಿದರು. ಆರ್ಥಿಕವಾಗಿ ಬೆಂಗಳೂರು ಬೆಳೆಯಬೇಕೆಂದು ನಗರದಲ್ಲಿ ಕೆರೆಗಳು, ದೇವಾಲಯಗಳು, ಪೇಟೆಗಳನ್ನು ನಿರ್ಮಾಣ ಮಾಡಿದರು. ಅಂಥ ವ್ಯಕ್ತಿಯನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ. ಅನೇಕ ರಾಜರು, ನಾಡಪ್ರಭುಗಳು ಆಗಿ ಹೋಗಿದ್ದರೂ ಸಮಾಜಮುಖಿಯಾಗಿ ಕೆಲಸ ಮಾಡಿರುವವರನ್ನು ನಾವು ಸ್ಮರಿಸುತ್ತೇವೆ ಹಾಗೂ ಅವರಿಂದ ಪ್ರೇರಣೆ ಹಾಗೂ ಸ್ಪೂರ್ತಿಯನ್ನು ಪಡೆಯುತ್ತೇವೆ. ಅಂತವರಲ್ಲಿ ಕೆಂಪೇಗೌಡರು ಪ್ರಮುಖರು. ಕೆಂಪೇಗೌಡರು ಬದುಕಿದ್ದ ಎಲ್ಲಾ ಭಾಗಗಳು ಅಭಿವೃದ್ಧಿಯಾಗಬೇಕೆಂದು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರವನ್ನು ಸ್ವಾಮೀಜಿಯವರ ಸಲಹೆ ಮೇರೆಗೆ ಸ್ಥಾಪಿಸಲಾಯಿತು. ಬೆಂಗಳೂರು ವಿಶ್ವವಿಖ್ಯಾತವಾಗಿದ್ದು, ಬ್ರಾಂಡ್ ಬೆಂಗಳೂರು ಸಾಧ್ಯವಾಗಿಸಲು ನಾವು ಹೊರಟಿದ್ದರೆ ಕೆಂಪೇಗೌಡರು ಕಾರಣ ಎಂದರು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...