ಬೆಂಗಳೂರು : ಜಿಲ್ಲಾ ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಆಯ್ಕೆ ಮಾಡಲು ಶಿಕ್ಷಣ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.ಮಾನ್ಯ ಆಯುಕ್ತರ ಕಛೇರಿಯಿಂದ ಹೊರಡಿಸಿರುವ ಸುತ್ತೋಲೆಯಂತೆ ಶಿಕ್ಷಕರನ್ನು ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡುವಾಗ ಅನುಸರಿಸಿರುವ ಮಾನದಂಡಗಳನ್ನು ಜಿಲ್ಲಾ ಪ್ರಶಸ್ತಿಗಳ ಆಯ್ಕೆಗೂ ಅನುಸರಿಸುವಂತೆ ಸೂಚಿಸಲಾಗಿದೆ.
ತಾಲ್ಲೂಕು ಮಟ್ಟದ ಆಯ್ಕೆ ಸಮಿತಿ ಶಿಫಾರಸ್ಸು ಮಾಡಿರುವ ಶಿಕ್ಷಕರ ಪ್ರಸ್ತಾವನೆಗಳನ್ನು ಜಿಲ್ಲಾ ಆಯ್ಕೆ ಸಮಿತಿ ಪರಿಶೀಲಿಸಿ, ಶಿಕ್ಷಕರ ಶೈಕ್ಷಣಿಕ ಹಾಗೂ ಇತರೆ ಸಾಧನೆಗಳನ್ನು ನಿಖರವಾಗಿ ಮೌಲ್ಯಮಾಪನ ಮಾಡಿ ಪ್ರಶಸ್ತಿಗೆ ಅರ್ಹರಾದಂತಹ ಶಿಕ್ಷಕರನ್ನು ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡುವುದು, ಅನುಬಂಧ-ಅ ನಲ್ಲಿ ಆಯಾ ಜಿಲ್ಲೆಗಳಲ್ಲಿರುವ ತಾಲ್ಲೂಕು ಸಂಖ್ಯೆಗಳಿಗೆ ಅನುಗುಣವಾಗಿ ಹಂಚಿಕೆ ಮಾಡಿರುವಂತೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಪ್ರಶಸ್ತಿಗಳ ಸಂಖ್ಯೆಗಳನ್ನು ಆಯ್ಕೆ ಮಾಡಲು ನಮೂದಿಸಿದೆ.
ತಾಲ್ಲೂಕು ಮಟ್ಟದ ಆಯ್ಕೆಸಮಿತಿ ಶಿಫಾರಸ್ಸು ಮಾಡಿರುವ ಪ್ರಸ್ತಾವನೆಯನ್ನು ಕೂಲಂಕುಶವಾಗಿ ಪರಿಶೀಲಿಸಿ ಮೌಲ್ಯಮಾಪನ ಮಾಡುವುದು.
ಒಂದು ತಾಲ್ಲೂಕಿನಿಂದ ಕನಿಷ್ಠ ಆರು ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ನಾಲ್ಕು ಪ್ರೌಢ ಶಾಲಾ ಶಿಕ್ಷಕರನ್ನು ಜಿಲ್ಲಾ ಹಂತದ ಪ್ರಶಸ್ತಿಗೆ ಶಿಫಾರಸ್ಸು ಮಾಡಬೇಕು. ಇದರಲ್ಲಿ ಶೇಕಡ 50 ಮಹಿಳಾ ಶಿಕ್ಷಕರನ್ನು ಒಳಗೊಂಡಿರಬೇಕು.
ಪ್ರಶಸ್ತಿಗೆ ಆಯ್ಕೆ ಮಾಡುವಾಗ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ತರಗತಿಗಳಲ್ಲಿ ಬೋಧನೆ ಮಾಡುವ ಹಾಗೂ ಶಾಲೆಗೆ ಪೂರಕವಾದ ಕಾರ್ಯಗಳಲ್ಲಿ ತೊಡಗಿಸಿಕೊಂಡ ಶಿಕ್ಷಕರನ್ನು ಮಾತ್ರ ಪರಿಗಣಿಸತಕ್ಕದ್ದು.
ಪ್ರಶಸ್ತಿಗೆ ಅರ್ಹರಾದಂತಹ ಶಿಕ್ಷಕರ ಒಟ್ಟಾರೆ ಸೇವೆಯಲ್ಲಿ ತರಗತಿಗಳಲ್ಲಿ ಬೋಧಕರಾಗಿ ಕನಿಷ್ಠ ಹತ್ತು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರಬೇಕು. ಅದರಲ್ಲಿ ಗ್ರಾಮೀಣ ಶಾಲೆಗಳಲ್ಲಿ ಕನಿಷ್ಠ 05 ವರ್ಷಗಳು ಸೇವೆ ಸಲ್ಲಿಸಿರಬೇಕು.
ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡುವಾಗ ಮಹಿಳಾ ಅಭ್ಯರ್ಥಿಗಳಿಗೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚು ಸೇವೆ ಸಲ್ಲಿಸಿದ ಶಿಕ್ಷಕರಿಗೆ ಆದ್ಯತೆ ನೀಡುವುದು.ಹಿಂದಿನ ಸಾಲುಗಳಲ್ಲಿ ಪ್ರಶಸ್ತಿ ಪಡೆದ ಶಿಕ್ಷಕರನ್ನು ಮತ್ತೆ ಮರು ಆಯ್ಕೆ ಮಾಡಬಾರದು.ಆಯ್ಕೆ ಮಾಡಿರುವ ಶಿಕ್ಷಕರು ಸಮಾಜದ ಹಾಗೂ ಇಲಾಖೆಯ ಗೌರವಗಳಿಗೆ ಪಾತ್ರರಾಗಿರಬೇಕು.ಶಿಕ್ಷಕರ ಆಯ್ಕೆ ಸಂಪೂರ್ಣವಾಗಿ ಮೌಲ್ಯಾಧಾರಿತವಾಗಿರಬೇಕು.ಪ್ರಶಸ್ತಿಗೆ ಆಯ್ಕೆಯಾಗುವ ಶಿಕ್ಷಕರು ಸಚ್ಛಾರಿತ್ರ್ಯವನ್ನು ಹೊಂದಿರಬೇಕು. ಅವರ ಬಗ್ಗೆ ಯಾವುದೇ ದೂರು, ವಿಚಾರಣೆ, ನ್ಯಾಯಾಲಯದ ಪ್ರಕರಣಗಳು ಇರಬಾರದು.ತಾಲ್ಲೂಕು ಆಯ್ಕೆ ಸಮಿತಿಯವರು ಅರ್ಹರಾದಂತಹ ಶಿಕ್ಷಕರ ಕಾರ್ಯಕ್ಷೇತ್ರಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವುದು.
ಅಂತಿಮವಾಗಿ ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾದಂತಹ ಶಿಕ್ಷಕರ ಕಾರ್ಯಕ್ಷೇತ್ರಕ್ಕೆ ಜಿಲ್ಲಾ ಅಯ್ಕೆ ಸಮಿತಿಯವರು ಭೇಟಿ ನೀಡಿ ತಾಲ್ಲೂಕು ಆಯ್ಕೆ ಸಮಿತಿಯವರು ಶಿಫಾರಸ್ಸು ಮಾಡಿರುವಂತಹ ಅಂಶಗಳನ್ನು ಪರಿಶೀಲಿಸಿದ ನಂತರ ಪ್ರಶಸ್ತಿಗೆ ಅರ್ಹರಾಗಿದ್ದರೆ ಮಾತ್ರ ಅಯ್ಕೆ ಮಾಡತಕ್ಕದ್ದು ಎಂದು ಸೂಚನೆ ನೀಡಲಾಗಿದೆ.