ಬೆಂಗಳೂರು: ತಾರಾ ಅನುರಾಧ ಅವರ ಚಾಲಕನ ಮೇಲೆ ಇದೀಗ ಎಫ್ಐಆರ್ ಆಗಿದೆ. ಅಜಾಗರೂಕತೆಯಿಂದ ಕಾರು ಚಲಾಯಿಸಿದ್ದಾರೆ ಅಂತ ಪೊಲೀಸರು ಎಫ್ಐಆರ್ ಮಾಡಿದ್ದಾರೆ. ಈ ಘಟನೆ ಅಕ್ಟೋಬರ್ 29 ರಂದು ನಡೆದಿದೆ. ತಾರಾ ಅವರು ಬೆಂಗಳೂರಿನ ಕತ್ರಿಗುಪ್ಪೆ ಬಳಿ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಅಕ್ಷಯ್, ಅವರು ಕಾರು ಓಡಿಸುತ್ತಿದ್ದರಂತೆ. ಇವರ ಕಾರು ಮುಂಭಾಗ ಚಲಿಸ್ತಿದ್ದ ಮತ್ತೊಂದು ಕಾರಿಗೆ ಗುದ್ದಿದೆ.
ಇನ್ನು ತಾರಾ ಅವರ ಕಾರು ಗಿರೀಶ್ ಎಂಬುವವರ ಕಾರಿಗೆ ಗುದ್ದಿದ ಪರಿಣಾಮ ಎದುರಿನ ಕಾರು ಜಖಂಗೊಂಡಿತ್ತು. ಈ ಅಪಘಾತದಲ್ಲಿ ಅಕ್ಷಯ್ ಅವರದ್ದೇ ತಪ್ಪು ಎನ್ನಲಾಗಿದೆ. ಅಕ್ಷಯ್ ಅವರ ಅಜಾಗರೂಕ ಚಾಲನೆಯಿಂದ ಈ ರೀತಿ ಆಗಿದೆ ಎಂದು ಎದುರಿನ ಕಾರಿನಲ್ಲಿದ್ದ ಗಿರೀಶ್ ಅವರು ಆರೋಪಿಸಿದ್ದರು. ನಂತರ ಕಾರು ಸರಿ ಮಾಡಿಸುತ್ತೇನೆ ಅಂತ ಅಕ್ಷಯ್ ಹೇಳಿದ್ದರಂತೆ.
ಸರಿ ಮಾಡಿಸುವ ಭರವಸೆ ಕೊಟ್ಟ ಅಕ್ಷಯ್ ಮತ್ತೆ ಗಿರೀಶ್ ಅವರನ್ನ ಸಾಕಷ್ಟು ಅಲೆದಾಡಿಸಿದ್ದಾರೆ. ಹೀಗಾಗಿ, ಗಿರೀಶ್ ಅವರು ಬನಶಂಕರಿ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರನ್ನು ಸ್ವೀಕರಿಸಿರುವ ಪೊಲೀಸರು ಐಪಿಸಿ ಸೆಕ್ಷನ್ 279 ಅಡಿ ಅಜಾಗರೂಕ ಚಾಲನೆ ಎಂದು ಕೇಸ್ ದಾಖಲು ಮಾಡಿಕೊಂಡಿದ್ದಾರೆ.