ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಮಾತಿನ ಸಮರ ತಾರಕಕ್ಕೇರಿದ್ದು, ಎಚ್ ಡಿ ರೇವಣ್ಣ ಬಂಧನದ ಹಿಂದೆ ಷಡ್ಯಂತ್ರವಿದೆ ಎಂದು ಆರೋಪಿಸಿದ್ದ ಕುಮಾರಸ್ವಾಮಿಯವರು ತೀವ್ರ ವಾಗ್ದಾಳಿ ನಡೆಸಿದ್ದರು.
ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಎಚ್ ಡಿ ರೇವಣ್ಣನವರ ಕೈವಾಡವಿರದಿದ್ದರೂ ಸಹ ಸಂಚು ನಡೆಸಿ ಈ ವಿಚಾರದಲ್ಲಿ ಅವರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಆರೋಪಿಸಿದ್ದ ಕುಮಾರಸ್ವಾಮಿ ಎಸ್ಐಟಿ ಕೂಡ ಪಕ್ಷಪಾತದಿಂದ ವರ್ತಿಸುತ್ತಿದೆ ಎಂದು ಹೇಳಿದ್ದರು.
ಇದರ ಮಧ್ಯೆ ಜಾತ್ಯಾತೀತ ಜನತಾದಳದ ಪ್ರತಿಭಟನೆಯ ಕುರಿತು ಮಹತ್ವದ ಸ್ಪಷ್ಟನೆ ನೀಡಿರುವ ಕುಮಾರಸ್ವಾಮಿಯವರು, ರೇವಣ್ಣ ವಿಚಾರದಲ್ಲಿ ಮಾತ್ರ ಹೋರಾಟ ನಡೆಸುತ್ತೇವೆ. ಪ್ರಜ್ವಲ್ ರೇವಣ್ಣ ವಿಷಯದಲ್ಲಲ್ಲ ಎಂದು ತಿಳಿಸಿದ್ದಾರೆ.
ನಾನು ರೇವಣ್ಣ ಸಂಬಂಧಿಕನಾಗಿ ಈ ಹೋರಾಟದಲ್ಲಿ ಭಾಗವಹಿಸುತ್ತಿಲ್ಲ, ಜಾತ್ಯತೀತ ಜನತಾದಳದ ಶಾಸಕಾಂಗ ಪಕ್ಷದ ನಾಯಕನಾಗಿ ಹೋರಾಟ ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.