ಬೆಹೆಷ್ತಾ ಅರ್ಘಂಡ್ ಹೆಸರಿನ ಈಕೆಯತ್ತ ಅಘೋಷಿತವಾಗಿ ಸೀದಾ ಬಂದ ತಾಲಿಬಾನ್ ನಾಯಕ ತನ್ನ ಸಂದರ್ಶನ ತೆಗೆದುಕೊಳ್ಳಲು ಆಕೆಗೆ ಸೂಚಿಸಿದ್ದಾನೆ. ಅದೃಷ್ಟವಶಾತ್ ಆ ವೇಳೆ ಉದ್ದುದ್ದ ಬಟ್ಟೆ ಧರಿಸಿದ್ದರಿಂದ ತಾನು ಬಚಾವಾದೆ ಎಂದು ಅರ್ಘಂಡ್ ಹೇಳಿಕೊಂಡಿದ್ದಾರೆ.
ಟೋಲೋ ನ್ಯೂಸ್‌ನಲ್ಲಿ ನಿರೂಪಕಿಯಾಗಿರುವ 24 ವರ್ಷದ ಅರ್ಘಂಡ್, ಆಗಸ್ಟ್ 17ರಂದು ತಾಲಿಬಾನಿ ನಾಯಕನ ಸಂದರ್ಶನ ತೆಗೆದುಕೊಂಡಿದ್ದಾರೆ. ತಾಲಿಬಾನ್ ನಾಯಕನೊಬ್ಬನ ನೇರ ಸಂದರ್ಶನ ಪಡೆದ ಮೊದಲ ನಿರೂಪಕಿಯಾಗಿದ್ದಾರೆ ಅರ್ಘಂಡ್.
ತಾಲಿಬಾನಿಗಳಿಂದ ಲೈಂಗಿಕ ಕಾರ್ಯಕರ್ತೆಯರ ಪಟ್ಟಿ ತಯಾರಿ…! ಹತ್ಯೆ ಮಾಡ್ತಾರಾ ಉಗ್ರರು…?
“ನನಗೆ ಶಾಕ್ ಆಗಿ ನಿಯಂತ್ರಣ ಕಳೆದುಕೊಂಡಿದ್ದೆ. ಸ್ಟುಡಿಯೋದಲ್ಲಿ ನಾನು ಏನು ಮಾಡುತ್ತಿದ್ದೇನೆ ಎಂದು ಕೇಳಲು ಅವರು ಬಂದಿದ್ದಾರೆ ಎಂದುಕೊಂಡಿದ್ದೆ. ನಮ್ಮಲ್ಲಿ ಭಿನ್ನ ಆಲೋಚನೆಗಳ ಭಿನ್ನ ಮಂದಿ ಇರುವ ಕಾರಣ ನಾನು ಸ್ಟುಡಿಯೋದಲ್ಲಿ ಯಾವಾಗಲೂ ಉದ್ದುದ್ದ ಬಟ್ಟೆಯನ್ನೇ ಧರಿಸುತ್ತೇನೆ” ಎಂದ ಅರ್ಘಂಡ್, ಈ ಸಂದರ್ಶನ ಮುಗಿದು ವಾರ ಕಳೆದ ಮೇಲೆ ಎಲ್ಲಾ ಟಿವಿ ವಾಹಿನಿಗಳ ಮಹಿಳಾ ಸಿಬ್ಬಂದಿಗೆ ಹಿಜಾಬ್ ಕಡ್ಡಾಯಗೊಳಿಸುವಂತೆ ತಾಲಿಬಾನ್ ಆದೇಶಿಸಿದ್ದಾಗಿ ತಿಳಿಸಿದ್ದಾರೆ.
ನೋಬೆಲ್ ಪುರಸ್ಕೃತೆ ಮಲಾಲಾ ಯೂಸಫ್‌ಜ಼ೈ ನೆರವಿನಿಂದ ತಾನು ಅಫ್ಘಾನಿಸ್ತಾನ ಬಿಟ್ಟು ದೋಹಾಗೆ ತೆರಳಲು ಸಾಧ್ಯವಾಯಿತು ಎನ್ನುವ ಅರ್ಘಂಡ್, ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ತಾನೇನು ಮಾಡುತ್ತಿದ್ದೇನೆ ಎಂದು ಹೊರಜಗತ್ತಿಗೆ ತಿಳಿಸದಂತೆ ತನಗೆ ತಾಲಿಬಾನ್ ಆದೇಶಿಸಿದ್ದಾಗಿ ಹೇಳಿಕೊಂಡಿದ್ದಾರೆ.