ಶಿರಸಿ ಅಂತಾ ಹೆಸರು ಕೇಳಿದ್ರೆ ಸಾಕು ನೆನಪಾಗೋದೇ ಶ್ರೀ ಮಾರಿಕಾಂಬಾ ದೇವರು. ಶಿರಸಿ ನಗರದ ಹೃದಯಭಾಗದಲ್ಲಿ ನೆಲೆಯೂರಿ ಭಕ್ತರು ಕೇಳಿದ್ದನ್ನ ಕರುಣಿಸೋ ಈ ತಾಯಿ ಕೇವಲ ಉತ್ತರ ಕನ್ನಡ ಮಾತ್ರವಲ್ಲದೇ ರಾಜ್ಯದ ಮೂಲೆ ಮೂಲೆಯಲ್ಲೂ ಭಕ್ತರನ್ನ ಹೊಂದಿದ್ದಾಳೆ. ದುರ್ಗಾ ದೇವಿಯ ಮತ್ತೊಂದು ರೂಪವಾದ ಈ ಮಾರಿಕಾಂಬೆ ತನ್ನ ದಿವ್ಯ ಶಕ್ತಿಯ ಮೂಲಕ ಶಿರಸಿಯನ್ನ ಕಾಯುತ್ತಿದ್ದಾಳೆ ಎಂಬ ನಂಬಿಕೆ ಇದೆ.
ಶಿರಸಿಯ ಶ್ರೀ ಮಾರಿಕಾಂಬಾ ದೇವಾಲಯ ಮಾರಿಗುಡಿ ಎಂಬ ಹೆಸರಿನಿಂದಲೇ ಹೆಚ್ಚು ಚಿರಪರಿಚಿತ. 8 ಕೈಗಳನ್ನ ಹೊಂದಿರುವ ಈ ಕೆಂಪು ಮುಖದ ತಾಯಿಯ ಸೌಂದರ್ಯವನ್ನ ನೋಡೋದೇ ಕಣ್ಣಿಗೆ ಪರಮಾನಂದ. 1688ರಲ್ಲಿ ನಿರ್ಮಾಣವಾದ ಈ ದೇಗುಲ ಗೋಕರ್ಣ ಕ್ಷೇತ್ರದಿಂದ ಕೇವಲ 83 ಕಿಲೋಮೀಟರ್ ದೂರದಲ್ಲಿದೆ.
ದೇವಸ್ಥಾನದ ಮುಂಭಾಗದಿಂದ ತೆರಳಿದ ಬಳಿಕ ನಿಮಗೆ ಬಹುದೊಡ್ಡ ಪ್ರಾಂಗಣ ಸಿಗುತ್ತೆ. ಇಲ್ಲೇ ನಿಮಗೆ ಸೇವಾ ಕೌಂಟರ್ ಕೂಡ ಸಿಗಲಿದೆ. ದೇಗುಲದ ಸುತ್ತ ದೇವಿಯ ವಿವಿಧ ರೂಪದ ಪೋಟೋಗಳನ್ನ ಹಾಕಲಾಗಿದೆ. ಗರ್ಭಗುಡಿಯಲ್ಲಿ ಎಂಟು ಭುಜ ಹಾಗೂ ಹುಲಿಯ ವಾಹನವನ್ನ ಹೊಂದಿರುವ ಉಗ್ರ ರೂಪದ ದೇವಿ ಕಾಣಸಿಗ್ತಾಳೆ. ಈ ದೇವಾಲಯದ ಗೋಡೆಗಳಲ್ಲಿ ಕಾವಿ ಬಣ್ಣದಲ್ಲಿ ಭಿತ್ತಿಚಿತ್ರಗಳನ್ನ ಬಿಡಿಸಲಾಗಿದೆ. ಕೋಟೆಕೆರೆ ಎಂಬಲ್ಲಿ ದೇವಿಯ ವಿಗ್ರಹ ದಕ್ಕಿತ್ತು ಎಂದು ಹೇಳಲಾಗುತ್ತೆ.
ಈ ದೇವಾಲಯದ ಜಾತ್ರೆ ಕರ್ನಾಟಕದ ಅತೀದೊಡ್ಡ ಜಾತ್ರೆಗಳಲ್ಲಿ ಒಂದು. ವರ್ಷ ಬಿಟ್ಟು ವರ್ಷ ಇಲ್ಲಿ ಜಾತ್ರೆ ನಡೆಯುತ್ತೆ. ಜಾತ್ರೆ ಪ್ರಯುಕ್ತ ದೇವರ ಮೂರ್ತಿಗೆ ಬಣ್ಣ ಬಳಿದ ವರ್ಷ ಇಲ್ಲಿನ ನಿವಾಸಿಗಳು ಹೋಳಿ ಹಬ್ಬವನ್ನ ಆಚರಣೆ ಮಾಡೋದಿಲ್ಲ. ಜಾತ್ರೆ ಇಲ್ಲದ ವರ್ಷ ಹೋಳಿ ಹಬ್ಬ ಆಚರಿಸೋದ್ರ ಜೊತೆಗೆ ತಲ ತಲಾಂತರದಿಂದ ನಡೆದುಕೊಂಡು ಬಂದ ಬೇಡರ ವೇಷವನ್ನ ಆಚರಣೆ ಮಾಡಲಾಗುತ್ತೆ.
ಶಿರಸಿ ಹಳೆ ಬಸ್ ನಿಲ್ದಾಣದಿಂದ ಅನತಿ ದೂರದಲ್ಲಿ ಈ ದೇವಾಲಯ ಇರೋದ್ರಿಂದ ನಿಮಗೆ ಸಾರಿಗೆ ವ್ಯವಸ್ಥೆಗೆ ಯಾವುದೇ ತೊಂದರೆ ಇಲ್ಲ. ಖಾಸಗಿ ವಾಹನಗಳ ಮೂಲಕವೂ ನೀವು ಈ ದೇಗುಲಕ್ಕೆ ಭೇಟಿ ನೀಡಬಹುದಾಗಿದೆ.