ಕೆಲವೇ ದಶಕಗಳಲ್ಲಿ ತಂತ್ರಜ್ಞಾನದಲ್ಲಿ ಬಹಳಷ್ಟು ಬದಲಾವಣೆಯಾಗಿವೆ. ಲ್ಯಾಂಡ್ಲೈನ್ ಫೋನ್ನಿಂದ ಹಿಡಿದು ಸ್ಮಾರ್ಟ್ಫೋನ್ ಬಂದ ಬಗೆ ನೋಡಿದರೆ ನಿಜಕ್ಕೂ ಅಚ್ಚರಿ ಮೂಡುತ್ತದೆ. 2-3 ದಶಕಗಳಲ್ಲಿ ಇಷ್ಟೊಂದು ಬದಲಾವಣೆ ಆಗುತ್ತದೆ ಎಂದು ಬಹುಶಃ ಯಾರೂ ಊಹಿಸಿರಲಿಕ್ಕಿಲ್ಲ. ಈಗ 2ಜಿ ಯಿಂದ 5ಜಿಯವರೆಗಿನ ತಂತ್ರಜ್ಞಾನ ಎಲ್ಲರನ್ನೂ ಮರುಳು ಮಾಡುವಂತಿದೆ.
ಪರಿಸ್ಥಿತಿ ಹೀಗಿರುವಾಗ ಎಷ್ಟೇ ಮುಂದುವರೆದರೂ ಹಿಂದಿನ ಕಾಲವೇ ಬೆಸ್ಟ್ ಇತ್ತು ಎಂದುಕೊಳ್ಳುವವರು ಹಿರಿಯ ಜೀವಗಳು. ಸ್ಮಾರ್ಟ್ಫೋನ್ ಬಂದ ಮೇಲೆ ಎಲ್ಲರ ಜೀವನವೂ ಯಾಂತ್ರಿಕವಾಗಿದೆ. ಸಂಬಂಧಗಳಿಗೆ ಬೆಲೆ ಇಲ್ಲದಾಗಿದೆ ಎನ್ನುವುದು ತಿಳಿದದ್ದೇ.
ಇದೇ ವಿಷಯವನ್ನು ಸೂಚ್ಯವಾಗಿ ಐಎಎಸ್ ಅಧಿಕಾರಿ ಅವನೀಶ್ ಶರಣ್ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. ಫೋನ್‌ಗಳ ವಿಕಾಸದ ನಂತರ ಮಾನವರ ಬದಲಾವಣೆಯ ಬಗ್ಗೆ ಕಠಿಣವಾದ ಪೋಸ್ಟ್ ಒಂದನ್ನು ಅವರು ಹಂಚಿಕೊಂಡಿದ್ದಾರೆ.
ಅವನೀಶ್ ಶರಣ್ ಫೆಬ್ರವರಿ 17 ರಂದು ಮಾಡಿರುವ ಪೋಸ್ಟ್ನಲ್ಲಿ ಟೇಬಲ್ ಮೇಲಿರುವ ಲ್ಯಾಂಡ್ಲೈನ್ ದೂರವಾಣಿಯ ಚಿತ್ರವನ್ನು ನೋಡಬಹುದು. ಅದರ ಅಡಿ “ಫೋನ್ ಅನ್ನು ತಂತಿಯಿಂದ ಕಟ್ಟಿದಾಗ – ಮಾನವರು ಸ್ವತಂತ್ರರಾಗಿದ್ದರು” ಎಂದು ಬರೆದಿದ್ದಾರೆ. ಈ ಒಂದು ಲೈನಿನ ಒಳಾರ್ಥ ಬಹಳ ಗಮನಾರ್ಹವಾಗಿದೆ. ಆಗಲೇ ಜೀವನ ಚೆನ್ನಾಗಿತ್ತು. ಈಗ ಕೈಯಲ್ಲಿ ಮೊಬೈಲ್ ಬಂದ ಮೇಲೆ ಸ್ಥಿತಿ ಹೇಗಾಗಿದೆ ಎನ್ನುವುದನ್ನು ತೋರಿಸುತ್ತದೆ.