ಲೋಕಸಭೆ ಚುನಾವಣೆಯ ಫಲಿತಾಂಶ ಷೇರುಪೇಟೆಯಲ್ಲಿ ಭಾರಿ ಸಂಚಲನ ಉಂಟುಮಾಡಿದೆ. ವಹಿವಾಟು ಆರಂಭದಲ್ಲೇ ಷೇರುಪೇಟೆಯಲ್ಲಿನ ದಾಖಲೆ ಕುಸಿತದ ಪರಿಣಾಮ ಚಿನ್ನ ಮತ್ತು ಬೆಳ್ಳಿಯ ಬೆಲೆಯ ಮೇಲೂ ಗೋಚರವಾಯ್ತು. ಲೋಕಸಭೆ ಚುನಾವಣೆಯ ಆಘಾತಕಾರಿ ಫಲಿತಾಂಶ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ತೀವ್ರ ಏರಿಕೆಗೆ ಕಾರಣವಾಯ್ತು. ಷೇರು ಮಾರುಕಟ್ಟೆಯಲ್ಲಿನ ಅಲ್ಲೋಲಕಲ್ಲೋಲದಿಂದಾಗಿ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಆಯ್ಕೆ ಮಾಡಿಕೊಂಡಿರುವುದೇ ಈ ಬೆಲೆ ಏರಿಕೆಗೆ ಕಾರಣ.
ವಹಿವಾಟು ಆರಂಭದಲ್ಲೇ ಚಿನ್ನದ ಬೆಲೆ ಸುಮಾರು 500 ರೂಪಾಯಿ ಏರಿಕೆಯೊಂದಿಗೆ 10 ಗ್ರಾಂಗೆ 72,200 ರೂಪಾಯಿಗೆ ತಲುಪಿತ್ತು. ಬೆಳ್ಳಿ ಬೆಲೆ 100 ರೂಪಾಯಿ ಹೆಚ್ಚಳದೊಂದಿಗೆ ಕೆಜಿಗೆ 92,000 ರೂಪಾಯಿ ಆಗಿತ್ತು. ಎಂಸಿಎಕ್ಸ್‌ನಲ್ಲಿ ಚಿನ್ನ 10 ಗ್ರಾಂಗೆ 549 ರೂಪಾಯಿಗಳಷ್ಟು ಏರಿಕೆಯಾಗಿ 72,279 ರೂಪಾಯಿಗಳಿಗೆ ತಲುಪಿತು. ಬೆಳ್ಳಿ 121 ರೂಪಾಯಿ ಏರಿಕೆಯಾಗಿದ್ದು, ಪ್ರತಿ ಕೆಜಿಗೆ 92,154 ರೂಪಾಯಿ ಆಗಿತ್ತು.
ಸದ್ಯ ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 72,550 ರೂಪಾಯಿಗೆ ತಲುಪಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 66,240 ರೂಪಾಯಿ ಆಗಿದೆ. ಮುಂಬೈನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 72,100 ರೂಪಾಯಿ ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 66090 ರೂಪಾಯಿ ಆಗಿದೆ. ದಿನದ ವಹಿವಾಟು ಅಂತ್ಯವಾಗುವವರೆಗೂ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಏರಿಳಿತಗಳು ನಿರಂತರವಾಗಿರುತ್ತವೆ.