ನವದೆಹಲಿ: ಭಾರತ ಚುನಾವಣಾ ಆಯೋಗ ಸೋಮವಾರ ಆಮ್ ಆದ್ಮಿ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡಿದೆ.
ಇನ್ನು ಮುಂದೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ರಾಷ್ಟ್ರೀಯ ಪಕ್ಷವಾಗಲಿದೆ. ಆಯೋಗವು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವನ್ನು ರಾಷ್ಟ್ರೀಯ ಪಕ್ಷಗಳಲ್ಲ ಎಂದು ಗುರುತಿಸಿದೆ.
ಆಮ್ ಆದ್ಮಿ ಪಕ್ಷವು ಕಾನೂನಿನ ಪ್ರಕಾರ ರಾಷ್ಟ್ರೀಯ ಪಕ್ಷವೆಂದು ಗುರುತಿಸಲು ನೀಡಿರುವ ಪ್ರಾತಿನಿಧ್ಯವನ್ನು ಪರಿಗಣಿಸಿ ಏಪ್ರಿಲ್ 13 ರೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಕರ್ನಾಟಕ ಹೈಕೋರ್ಟ್ ಗುರುವಾರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಆಯೋಗವು ಏಪ್ರಿಲ್ 13 ರೊಳಗೆ ನಿರ್ಧಾರ ತೆಗೆದುಕೊಂಡು ಅರ್ಜಿಯನ್ನು ವಿಲೇವಾರಿ ಮಾಡುವಂತೆ ಕೋರ್ಟ್ ಸೂಚಿಸಿತ್ತು.
ಪಕ್ಷವು ದೆಹಲಿ, ಪಂಜಾಬ್, ಗೋವಾ ಮತ್ತು ಗುಜರಾತ್‌ನಲ್ಲಿ ರಾಜ್ಯ ಪಕ್ಷವಾಗಿ ಗುರುತಿಸಲ್ಪಟ್ಟಿದೆ. ಅದು 2022 ರಲ್ಲಿ ಗುಜರಾತ್ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಅಲ್ಲಿ ಗಳಿಸಿದ ಮತಗಳ ವಿವರಗಳನ್ನು ಆಯೋಗಕ್ಕೆ ಸಲ್ಲಿಸಿ ಕಾಯಿದೆಯ ಕಲಂ 6 ಬಿ ಪ್ರಕಾರ ರಾಷ್ಟ್ರೀಯ ಪಕ್ಷವೆಂದು ಗುರುತಿಸಲು ಕೋರಿತ್ತು. ನಾಲ್ಕು ವಿವಿಧ ರಾಜ್ಯಗಳಲ್ಲಿ ಶೇಕಡಾ 6 ರಷ್ಟು ಮತಗಳನ್ನು ಪಡೆಯುವ ಪಕ್ಷವು ರಾಷ್ಟ್ರೀಯ ಪಕ್ಷವಾಗಿ ಗುರುತಿಸಿಕೊಳ್ಳಲು ಅರ್ಹವಾಗಿರುತ್ತದೆ.