ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿ ಇರಬೇಕಾದ ವೈದ್ಯರು ಆ ಸಂದರ್ಭದಲ್ಲಿ ಕ್ರಿಕೆಟ್ ಆಡುವುದರಲ್ಲಿ ತೊಡಗಿದ್ದ ಕಾರಣ ಸಕಾಲಕ್ಕೆ ಚಿಕಿತ್ಸೆ ಸಿಗದೆ ಬಾಲಕಿಯೊಬ್ಬಳು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಬದಾಯುದಲ್ಲಿ ನಡೆದಿದೆ.
ಸೋಫಿಯಾ ಎಂಬ 5 ವರ್ಷದ ಬಾಲಕಿ ಮೃತಪಟ್ಟಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದ ಈಕೆಯನ್ನು ಆಕೆಯ ತಂದೆ ನಜೀಮ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದರು.
ಆದರೆ ಆ ಸಂದರ್ಭದಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕ್ರಿಕೆಟ್ ಮ್ಯಾಚ್ ಆಡುತ್ತಿದ್ದು, ನಜೀಮ್ ತಮ್ಮ ಮಗಳನ್ನು ಎತ್ತಿಕೊಂಡು ಕೊಠಡಿಯಿಂದ ಕೊಠಡಿಗೆ ಅಲೆದಾಡಿದರೂ ಯಾವ ವೈದ್ಯರು ಲಭ್ಯವಿರಲಿಲ್ಲ.
ಅಂತಿಮವಾಗಿ ಬಾಲಕಿ ಮೃತಪಟ್ಟಿದ್ದು, ಮಾಧ್ಯಮಗಳಲ್ಲಿ ಈ ವಿಚಾರ ವರದಿಯಾಗುತ್ತಿದ್ದಂತೆ ಇದೀಗ ಆರೋಪ ಕುರಿತು ತನಿಖೆ ನಡೆಸುವ ಸಲುವಾಗಿ ಮೂವರು ಸದಸ್ಯರ ಸಮಿತಿ ರಚಿಸಲಾಗಿದೆ. ಈ ಸಮಿತಿ ನೀಡುವ ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಾಲೇಜಿನ ಪ್ರಾಚಾರ್ಯ ಪ್ರೊ. ಅರುಣ್ ಕುಮಾರ್ ತಿಳಿಸಿದ್ದಾರೆ.