ಬೆಂಗಳೂರು : ಅತ್ತಿಬೆಲೆಯಲ್ಲಿ ನಡೆದ ಪಟಾಕಿ ದುರಂತಕ್ಕೆ ಇಡೀ ರಾಜ್ಯವೇ ಮರುಗಿದೆ. ಘೋರ ದುರಂತದಲ್ಲಿ 14 ಮಂದಿ ಸುಟ್ಟು ಕರಕಲಾಗಿದ್ದು, ಪೋಷಕರ ಆಕ್ರಂದನ ಹೇಳತೀರದು.
ಘಟನೆ ಹಿನ್ನೆಲೆ ಎಚ್ಚೆತ್ತ ಸರ್ಕಾರ ಬೆಂಗಳೂರಲ್ಲಿ ಪಟಾಕಿ ಬ್ಯಾನ್ ಮಾಡಲು ಚಿಂತನೆ ನಡೆಸಿದೆ ಎನ್ನಲಾಗಿದೆ.
ಅತ್ತಿಬೆಲೆಯ ಬಾಲಾಜಿ ಪಟಾಲಿ ಅಂಗಡಿಗೆ ಬೆಂಕಿ ಬಿದ್ದು 14 ಮಂದಿ ಸಜೀವ ದಹನವಾಗಿದ್ದು, ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದಿದ್ದರಿಂದ ಈ ಘಟನೆ ನಡೆದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಅಲರ್ಟ್ ಬೆಂಗಳೂರು ಜಿಲ್ಲಾಡಳಿತ ಪಟಾಕಿ ಗೋಡೌನ್ ಗಳ ಮೇಲೆ ರೇಡ್ ನಡೆಸಿ ಪರಿಶೀಲನೆ ನಡೆಸುತ್ತಿದೆ.
ಈ ಬಾರಿ ಬೆಂಗಳೂರಲ್ಲಿ ಪಟಾಕಿ ಬ್ಯಾನ್ ಮಾಡಬೇಕು, ಈ ಮೂಲಕ ಮುಂಜಾಗೃತಾ ಕ್ರಮ ಕೈಗೊಳ್ಳದ ಪಟಾಕಿ ಅಂಗಡಿಗಳಿಗೆ ಬಿಸಿ ಮುಟ್ಟಿಸಬೇಕು ಎಂದು ಜಿಲ್ಲಾಡಳಿತ ನಡೆಸಿದ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ. ಬೆಂಗಳೂರಿನ ಎಲ್ಲಾ ಕಡೆ ಸಾಧ್ಯವಾಗದಿದ್ದರೆ , ಪ್ರಮುಖ ಬಡಾವಣೆಗಳಲ್ಲಿ ಪಟಾಕಿ ಬ್ಯಾನ್ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಶನಿವಾರ ಮಧ್ಯಾಹ್ನ 3:30 ರ ಸುಮಾರಿಗೆ ಮೊದಲ ಬಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಇದರಲ್ಲಿ 14 ಜನರು ಸಜೀವ ದಹನವಾಗಿದ್ದಾರೆ. ಮೃತರ ಕುಟುಂಬಕ್ಕೆ ಕರ್ನಾಟಕ ಸರ್ಕಾರ 5 ಲಕ್ಷ ರೂಪಾಯಿ ಹಾಗೂ ತಮಿಳುನಾಡು ಸರ್ಕಾರ 3 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.