ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಯೊಳಗೆ ಸಿಲುಕಿದ್ದ 14 ತಿಂಗಳ ಬಾಲಕ ಸಾತ್ವಿಕ್ ಎಂಬಾತನನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಬಾಲಕ ಅಪಾಯದಿಂದ ಪಾರಾಗಿದ್ದಾನೆ. 18 ಗಂಟೆಗಳ ಕಾಲ ಅನ್ನಾಹಾರವಿಲ್ಲದೆ ಇದ್ದರೂ ಸಹ ಬಾಲಕ ಪವಾಡ ಸದೃಶ ರೀತಿಯಲ್ಲಿ ಬದುಕಿ ಬಂದಿದ್ದು, ಬಾಲಕ ಸುರಕ್ಷಿತವಾಗಿ ಬರಲೆಂದು ಹಾರೈಸಿ ಕೋಟ್ಯಾಂತರ ಮಂದಿ ಸಲ್ಲಿಸಿದ್ದ ಪ್ರಾರ್ಥನೆ ಫಲಿಸಿದೆ.
ಇದರ ಮಧ್ಯೆ ವಿಜಯಪುರ ಜಿಲ್ಲಾಡಳಿತ, ಕೊಳವೆಬಾವಿ ಕೊರೆಸಿದ ಬಳಿಕ ಅದನ್ನು ಮುಚ್ಚದೆ ಹಾಗೆಯೇ ಬಿಟ್ಟು ಇಂತಹದೊಂದು ಅವಘಡಕ್ಕೆ ಕಾರಣವಾದ ಜಮೀನಿನ ಮಾಲೀಕ ಹಾಗೂ ಮಗುವಿನ ಅಜ್ಜ ಶಂಕರಪ್ಪ ಮುಜಗೊಂಡ ಮತ್ತು ಕೊಳವೆ ಬಾವಿ ಕೊರೆದ ಏಜೆನ್ಸಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿದೆ. ವಿಜಯಪುರ ಜಿಲ್ಲಾಧಿಕಾರಿ ಟಿ. ಭೂಬಾಲನ್ ಈ ನಿಟ್ಟಿನಲ್ಲಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಶಂಕರಪ್ಪ ಮುಜಗೊಂಡ, ಮೊಮ್ಮಗನನ್ನು ರಕ್ಷಿಸಲು ಜಿಲ್ಲಾಡಳಿತ ಸಾಕಷ್ಟು ಶ್ರಮ ವಹಿಸಿದೆ. ಇದಕ್ಕಾಗಿ ಧನ್ಯವಾದಗಳು ಅರ್ಪಿಸುತ್ತೇವೆ. ಆದರೆ ನಾವು ಬಡವರಾಗಿದ್ದು, ಕ್ರಮ ತೆಗೆದುಕೊಳ್ಳುವುದು ಬೇಡ ಎಂದು ಮನವಿ ಮಾಡಿದ್ದಾರೆ. ಇದೀಗ ಮಗುವಿನ ರಕ್ಷಣೆಗಾಗಿ ಕೊಳವೆ ಬಾವಿ ಪಕ್ಕದಲ್ಲಿ ತೋಡಲಾಗಿದ್ದ 22 ಅಡಿ ಆಳದ ಗುಂಡಿಯನ್ನು ಮಣ್ಣು ಹಾಕಿ ಸಮತಟ್ಟು ಮಾಡಿಸಿಕೊಳ್ಳುವ ಹೊಣೆಯೂ ಬಾಲಕನ ಅಜ್ಜನ ಮೇಲೆ ಬಿದ್ದಿದೆ.