ಎಲ್ಲೆಡೆ ಮುಂಗಾರು ಮಳೆ ಆರ್ಭಟ ಜೋರಾಗಿದೆ. ಮಳೆ, ಗಾಳಿಯಿಂದ ರಕ್ಷಣೆ ಪಡೆಯಲು ಜನ ಜರ್ಕಿನ್, ಕೊಡೆ ಹುಡುಕತೊಡಗಿದ್ದಾರೆ. ಮಳೆಗಾಲ ಮುಗಿದ ಕೂಡಲೇ ಮೂಲೆ ಸೇರಿಕೊಳ್ಳುವ ರಕ್ಷಣೆಯ ಪರಿಕರಗಳಿಗೆ ಈಗ ಮತ್ತೆ ಬೇಡಿಕೆ ಬಂದಿದೆ. ಶಾಲೆಗೆ ಹೋಗುವ ಮಕ್ಕಳು, ಕಾಲೇಜ್ ಗೆ ಹೋಗುವ ವಿದ್ಯಾರ್ಥಿಗಳು, ಕೆಲಸ ಕಾರ್ಯಗಳಿಗೆ ಮನೆಯಿಂದ ಹೊರ ಹೋಗುವವರು ಕೊಡೆ ಇಲ್ಲವೇ ಜರ್ಕಿನ್ ಬಳಸುವುದು ಸಹಜ.
ಮಾರುಕಟ್ಟೆಯಲ್ಲಿಯೂ ನಾನಾ ವಿಧದ ಜರ್ಕಿನ್, ಬಣ್ಣ ಬಣ್ಣದ ಕೊಡೆಗಳು ಮಾರಾಟಕ್ಕೆ ಬಂದಿವೆ. ಶಾಪ್ ಗಳಲ್ಲಿ ಮಾತ್ರವಲ್ಲ, ಬೀದಿಗಳಲ್ಲಿಯೂ ಜರ್ಕಿನ್, ಛತ್ರಿ, ರೇನ್ ಕೋಟ್, ಟೋಪಿ ಮಾರಾಟವಾಗುತ್ತಿವೆ.
ಯುವತಿಯರಿಗೆ ಬಣ್ಣದ ಛತ್ರಿಗಳು ಇಷ್ಟವಾದರೆ, ಯುವಕರಿಗೆ ಆಕರ್ಷಕ ಜರ್ಕಿನ್ ಇಷ್ಟವಾಗುತ್ತವೆ. ಮಕ್ಕಳಿಗಾಗಿ ಸ್ಕೂಲ್ ಬ್ಯಾಗ್ ಆವರಿಸಿಕೊಳ್ಳುವಂತೆ ದೊಡ್ಡ ರೇನ್ ಕೋಟ್ ಬಂದಿವೆ. ಮಳೆಯಾಗುತ್ತಿರುವುದರಿಂದ ಬೆಲೆಯೂ ಕೊಂಚ ದುಬಾರಿಯಾಗಿದೆ.
ಹೊಸದಾಗಿ ಜರ್ಕಿನ್, ಕೊಡೆ ಖರೀದಿಸುವುದಕ್ಕಿಂತ ಮನೆಯಲ್ಲಿ ತೆಗೆದಿಟ್ಟಿರುವ ವಸ್ತುಗಳನ್ನು ಹುಡುಕಿ ಸ್ವಚ್ಛಗೊಳಿಸಿ ಬಳಸುವುದು ಉತ್ತಮ. ಆದರೆ, ಕೆಲವರು ಹುಡುಕುವ ಗೋಜಿಗೇ ಹೋಗಲ್ಲ, ಹೊಸದನ್ನೇ ಇಷ್ಟ ಪಡುತ್ತಾರೆ. ಅದೇನೆ ಇರಲಿ. ಮಳೆ ಆರಂಭವಾಗುತ್ತಿರುವಂತೆಯೇ ಮೂಲೆ ಸೇರಿದ್ದ ಕೊಡೆ, ಜರ್ಕಿನ್ ಮತ್ತೆ ಬೇಡಿಕೆ ಪಡೆದಿವೆ.