ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಸುಸಜ್ಜಿತವಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಬೇಕೆಂಬ ಕೂಗು ಬಹುಕಾಲದಿಂದಲೂ ಕೇಳಿ ಬರುತ್ತಿದೆ. ಇತ್ತೀಚೆಗೆ ಹೊನ್ನಾವರದಿಂದ ಮಣಿಪಾಲ ಆಸ್ಪತ್ರೆಗೆ ರೋಗಿಯೊಬ್ಬರನ್ನು ಕರೆದುಕೊಂಡು ಹೋಗುವ ವೇಳೆ ಉಡುಪಿ ಬಳಿ ಸಂಭವಿಸಿದ ಆಂಬುಲೆನ್ಸ್ ಅಪಘಾತದ ಬಳಿಕ ಈ ಕೂಗಿಗೆ ಮತ್ತಷ್ಟು ಬಲ ಬಂದಿದೆ.
ಈ ಹಿನ್ನೆಲೆಯಲ್ಲಿ ಪ್ರಿಂಟ್ ಹಾಗೂ ದೃಶ್ಯ ಮಾಧ್ಯಮ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕವೂ ಉತ್ತರ ಕನ್ನಡ ಜಿಲ್ಲೆಯ ಜನರು, ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದು, ಇಂದು ಸಂಜೆ 5 ಗಂಟೆಯಿಂದ ರಾಷ್ಟ್ರಮಟ್ಟದ ಟ್ವಿಟರ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಕ್ ಮಾಂಡವೀಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಸುಧಾಕರ್ ಸೇರಿದಂತೆ ರಾಷ್ಟ್ರ ಮತ್ತು ರಾಜ್ಯಮಟ್ಟದ ಜನಪ್ರತಿನಿಧಿಗಳನ್ನು ಟ್ಯಾಗ್ ಮಾಡಲಾಗುತ್ತಿದ್ದು, ಇಂದು ಸಂಜೆ 5:00 ಗಂಟೆಗೆ ಗರಿಷ್ಟ ಸಂಖ್ಯೆಯಲ್ಲಿ ಟ್ವೀಟ್ ಮಾಡಲು ಕರೆ ನೀಡಲಾಗಿದೆ.