ಅಸ್ಸಾಂನ ಗುವಾಹಟಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಡೆಲಿವರಿ ಏಜೆಂಟ್ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಅವರನ್ನು ಅಮಾನತು ಮಾಡಲಾಗಿದೆ.
ಶುಕ್ರವಾರ ಸಂಜೆ 6:30 ರ ಸುಮಾರಿಗೆ ಫ್ಯಾನ್ಸಿ ಬಜಾರ್ನ ಜೈಲ್ ರೋಡ್ ಟ್ರಾಫಿಕ್ ಪಾಯಿಂಟ್ ಬಳಿ ಡೆಲಿವರಿ ಏಜೆಂಟ್ ಟ್ರಾಫಿಕ್ ಸಿಗ್ನಲ್ ಲೆಕ್ಕಿಸದೆ ಸಾಗಿದಾಗ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಪೊಲೀಸರನ್ನು ಉಲ್ಲೇಖಿಸಿ ವರದಿಗಳ ಪ್ರಕಾರ, ಡೆಲಿವರಿ ಏಜೆಂಟ್ ‘ನೋ ಎಂಟ್ರಿ’ ವಲಯದಲ್ಲಿ ಸವಾರಿ ಮಾಡುತ್ತಿದ್ದ ಹಾಗೂ ಪೊಲೀಸ್ ಭದ್ರತಾ ಅಧಿಕಾರಿ (ಪಿಎಸ್ಒ) ನಿಲ್ಲಲು ಸೂಚಿಸಿದರೂ ತಪ್ಪಿಸಿಕೊಳ್ಳಲು ಯತ್ನಿಸಿದ ಎನ್ನಲಾಗಿದೆ.
ಸಾರ್ವಜನಿಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿಯಲಾದ ದೃಶ್ಯಾವಳಿಯಲ್ಲಿ, ಪನ್ಬಜಾರ್ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ಇನ್ಸ್ಪೆಕ್ಟರ್ ಭಾರ್ಗವ್ ಬೊರ್ಬೊರಾ, , ಡೆಲಿವರಿ ಏಜೆಂಟ್ನನ್ನು ರಸ್ತೆಬದಿಗೆ ಎಳೆದುಕೊಂಡು ಹೋಗುವಾಗ ಇನ್ನೊಬ್ಬ ಅಧಿಕಾರಿ ಏಜೆಂಟ್ನ ಸ್ಕೂಟರ್ ಅನ್ನು ಪಕ್ಕಕ್ಕೆ ಸರಿಸಿದ್ದಾರೆ.
ಇನ್ಸ್ಪೆಕ್ಟರ್ ಬೋರ್ಬೊರಾ ಡೆಲಿವರಿ ಏಜೆಂಟ್ ಕುತ್ತಿಗೆಯನ್ನು ಹಿಡಿದು ಆಕ್ರಮಣಕಾರಿಯಾಗಿ ಪ್ರಶ್ನಿಸುತ್ತಿರುವುದು ಹಾಗೂ ಬೆದರಿಕೆ ಹಾಕುವುದು ವೀಡಿಯೊದಲ್ಲಿ ದಾಖಲಾಗಿದೆ.
ಈ ವೇಳೆ ಸಾರ್ವಜನಿಕರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರೂ, ಇನ್ಸ್ಪೆಕ್ಟರ್ ಬೊರ್ಬೊರಾ ಡೆಲಿವರಿ ಏಜೆಂಟ್ಗೆ ಹೊಡೆಯುವುದನ್ನು ಮುಂದುವರೆಸಿದ್ದಾರೆ. ಈ ಘಟನೆಯನ್ನು ತನ್ನ ಮೊಬೈಲ್ ನಲ್ಲಿ ದಾಖಲಿಸಿಕೊಂಡಿರುವ ಪ್ರತ್ಯಕ್ಷದರ್ಶಿಗೂ ಅಧಿಕಾರಿ ಬೆದರಿಕೆ ಹಾಕಿದ್ದಾರೆ. ವಿಡಿಯೋ ವೈರಲ್ ಆದ ನಂತರ ಅಸ್ಸಾಂ ಡಿಜಿಪಿ ಹಲ್ಲೆಯಲ್ಲಿ ಭಾಗಿಯಾದ ಪೋಲೀಸರನ್ನು ಅಮಾನತುಗೊಳಿಸಿದ್ದಾರೆ.
— Northeast Live (@NELiveTV) November 16, 2024