ಚಂಡೀಗಢ : ಕಳೆದ ತಿಂಗಳು ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಟಿ, ಸಂಸದೆ ಕಂಗನಾ ರನೌತ್ ಗೆ ಕಪಾಳಮೋಕ್ಷ ಮಾಡಿದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ ಎಫ್) ಕಾನ್ಸ್ಟೇಬಲ್ ಕುಲ್ವಿಂದರ್ ಕೌರ್ ಅವರನ್ನು ಮರು ನೇಮಿಸಲಾಗಿದ್ದು, ಬೆಂಗಳೂರಿಗೆ ವರ್ಗಾಯಿಸಲಾಗಿದೆ ಎಂದು ಮೂಲಗಳು ಬುಧವಾರ ತಿಳಿಸಿವೆ.
ಸಂಸದೆ ಕಂಗನಾ ರನೌತ್ ಗೆ ಕಪಾಳಮೋಕ್ಷ ಮಾಡಿದ ಹಿನ್ನೆಲೆ ಅವರನ್ನು ಅಮಾನತುಗೊಳಿಸಲಾಗಿತ್ತು, ಅವರನ್ನು ಇದೀಗ ಪುನಃ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ ಮತ್ತು ಬೆಂಗಳೂರಿನಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕೌರ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು) ಮತ್ತು 341 (ತಪ್ಪಾದ ಸಂಯಮ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದೆಹಲಿ ವಿಮಾನ ಹತ್ತುವ ಮೊದಲು ಚಂಡೀಗಢ ವಿಮಾನ ನಿಲ್ದಾಣದಲ್ಲಿ ಮಹಿಳಾ ಕಾನ್ಸ್ಟೇಬಲ್ ತನ್ನನ್ನು ಕಪಾಳಮೋಕ್ಷ ಮಾಡಿ ನಿಂದಿಸಿದ್ದಾರೆ ಎಂದು ಸಿಐಎಸ್ಎಫ್ ಅಧಿಕಾರಿಗಳಿಗೆ ತಿಳಿಸಿದ ನಂತರ ಸಿಐಎಸ್ಎಫ್ ಕಾನ್ಸ್ಟೇಬಲ್ ಅನ್ನು ಆರಂಭದಲ್ಲಿ ವಶಕ್ಕೆ ತೆಗೆದುಕೊಳ್ಳಲಾಯಿತು ಮತ್ತು ನಂತರ ಅಮಾನತುಗೊಳಿಸಲಾಗಿತ್ತು.
ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ನವದೆಹಲಿಯಲ್ಲಿ ಪ್ರತಿಭಟನೆ ಕೈಗೊಂಡಿದ್ದ ರೈತರ ಕುರಿತು ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವಹೇಳನಕಾರಿ ಮಾತುಗಳನ್ನಾಡಿದ್ದರೆಂಬ ಕಾರಣಕ್ಕೆ ಅವರ ಕೆನ್ನೆಗೆ ಬಾರಿಸಿ ದೊಡ್ಡ ಮಟ್ಟದಲ್ಲಿ ಕುಲ್ವಿಂದರ್ ಕೌರ್ ಚರ್ಚೆಗೆ ಗುರಿಯಾಗಿದ್ದರು.
ಘಟನೆ ಕುರಿತಂತೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಅವರು ನನ್ನ ತಾಯಿಯೂ ಸಹ ಅಂದಿನ ರೈತ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅಂತಹ ಸಂದರ್ಭದಲ್ಲಿ ಪ್ರತಿಭಟನಾನಿರತರ ಕುರಿತು ನಟಿ ಕಂಗನಾ ಅವಹೇಳನಕಾರಿಯಾಗಿ ಮಾತನಾಡಿದ್ದು ನನ್ನಲ್ಲಿ ಆಕ್ರೋಶ ಹುಟ್ಟು ಹಾಕಿತ್ತು ಎಂದು ಕುಲ್ವಿಂದರ್ ಕೌರ್ ಹೇಳಿದ್ದರು.