ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸುಮಾರು ಎರಡು ತಿಂಗಳ ನಂತರ ಅಧಿಕಾರಿಗಳ ಸಭೆ ನಡೆಸಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಇದರ ನಡುವೆಯೂ ಅನೌಪಚಾರಿಕ ಸಭೆ ನಡೆಸಿ ಬರ ಪರಿಹಾರ, ಮುಂಗಾರು ಸಿದ್ಧತೆ ಪರಿಶೀಲನೆ, ಶಾಸಕರ ಅನುದಾನ ಬಿಡುಗಡೆಗೆ ಸೂಚನೆ ನೀಡಿದ್ದಾರೆ.
ಬಜೆಟ್ ಕಾರ್ಯಕ್ರಮಗಳ ಟೆಂಡರ್ ಗೆ ಸಿದ್ಧತೆ ನಡೆಸಿ ಜನಸ್ಪಂದನ ಅರ್ಜಿಗಳ ವಿಲೇವಾರಿಗೆ ಗಡುವು ನೀಡಿದ್ದಾರೆ. ಜೂನ್ ಮೊದಲ ವಾರದಲ್ಲಿ ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಶಾಸಕರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿ ಅನುದಾನ ಬಿಡುಗಡೆ ಮಾಡಬೇಕು. ಬಜೆಟ್ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಪೂರ್ಣ ತಯಾರಿ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಉತ್ತಮ ಮುಂಗಾರು ಮಳೆಗಾಲದ ನಿರೀಕ್ಷೆ ಇದ್ದು ರೈತರಿಗೆ ಅಗತ್ಯವಾದ ಬಿತ್ತನೆ ಬೀಜ ಗೊಬ್ಬರ ಸಕಾಲಕ್ಕೆ ಸಿಗುವಂತೆ ಪೂರ್ಣ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರು, ನಾನಾ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.