ನವದೆಹಲಿ : ಕೇಂದ್ರ ಚುನಾವಣಾ ಆಯೋಗ ಇಂದು ಲೋಕಸಭಾ ಚುನಾವಣೆ 2024 ರ ದಿನಾಂಕ ಘೋಷಿಸಿದೆ.ಕರ್ನಾಟಕ ಸೇರಿದಂತೆ 543 ಕ್ಷೇತ್ರಗಳ ಚುನಾವಣೆಗೆ ದಿನಾಂಕ ಪ್ರಕಟಿಸಲಾಗಿದೆ. ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ದಕ್ಷಿಣ ಕರ್ನಾಟಕದಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯಲಿದ್ದು, ಉತ್ತರಕರ್ನಾಟಕ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದ 543 ಲೋಕಸಭಾ ಕ್ಷೇತ್ರಗಳಿಗೆ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್ 19 ರಂದು ಮೊದಲ ಹಂತದ ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಘೋಷಿಸಿದ್ದಾರೆ.
ಇತ್ತೀಚೆಗೆ ಇಬ್ಬರು ಚುನಾವಣಾ ಆಯೋಗಗಳನ್ನು ನೇಮಕ ಮಾಡಿದ ನಂತರ, ರಾಜೀವ್ ಕುಮಾರ್ ಅವರು ತಂಡವು ಈಗ ಪೂರ್ಣಗೊಂಡಿದೆ ಎಂದು ಹೇಳಿದರು. ಭಾರತೀಯ ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬಕ್ಕೆ ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ಲೋಕಸಭಾ ಚುನಾವಣೆ ನಡೆಸಲು 10 ಲಕ್ಷ ಮತಗಟ್ಟೆಗಳು ಮತ್ತು 1.5 ಕೋಟಿ ಚುನಾವಣಾ ಅಧಿಕಾರಿಗಳ ಅಗತ್ಯವಿದೆ, ದೇಶಾದ್ಯಂತ 97 ಕೋಟಿ ಮತದಾರರದಿದ್ದಾರೆ ಎಂದು ರಾಜೀವ್ ಕುಮಾರ್ ಹೇಳಿದರು.
ಲೋಕಸಭಾ ಚುನಾವಣೆ 2024 ರ ಮೆಗಾ ಮತದಾನಕ್ಕೆ ಸೇರುವಂತೆ ಮತದಾರರಿಗೆ ಸಿಇಸಿ ರಾಜೀವ್ ಕುಮಾರ್ ಕರೆ ನೀಡಿದ್ದಾರೆ. ಪ್ರತಿ ಚುನಾವಣೆಯು ಸಂವಿಧಾನವು ವಹಿಸಿದ ಪವಿತ್ರ ಜವಾಬ್ದಾರಿ ಎಂದು ಅವರು ಹೇಳಿದರು. ನಮಗೆ ವಹಿಸಿದ ಜವಾಬ್ದಾರಿಯನ್ನು ಚುನಾವಣಾ ಆಯೋಗವು ನಮ್ರತೆ ಮತ್ತು ಶ್ರದ್ಧೆಯಿಂದ ತೆಗೆದುಕೊಳ್ಳುತ್ತದೆ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗೆ ಬದ್ಧತೆ ಸ್ಥಿರವಾಗಿದೆ ಎಂದರು.
ದೇಶದಲ್ಲಿ 1.8 ಕೋಟಿ ಮತದಾರರು ಮೊದಲ ಬಾರಿಗೆ ಮತಚಲಾವಣೆ ಮಾಡಲಿದ್ದಾರೆ ಎಂದು ಹೇಳಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, 49.7 ಕೋಟಿ ಪುರುಷರು, 47.1 ಕೋಟಿ ಮಹಿಳಾ ಮತದಾರರಿದ್ದಾರೆ. 48 ಸಾವಿರ ತೃತೀಯ ಲಿಂಗಿ ಮತದಾರರು ಮತಚಲಾಯಿಸಲಿದ್ದಾರೆ. 85 ವರ್ಷ ಮೇಲ್ಪಟ್ಟ 82 ಲಕ್ಷ ಮತದಾರರು ಮತಚಲಾಯಿಸಲಿದ್ದಾರೆ. 19.74 ಕೋಟಿ ಯುವ ಮತದಾರರು ಮತ ಚಲಾಯಿಸಲಿದ್ದಾರೆ ಎಂದರು.