ಕಳೆದ ತಿಂಗಳು ಪಂಜಾಬ್‌ನ ಪಟಿಯಾಲದಲ್ಲಿ 10 ವರ್ಷದ ಬಾಲಕಿಯೊಬ್ಬಳ ದಾರುಣ ಸಾವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಹುಟ್ಟುಹಬ್ಬ ಆಚರಿಸಲು ಆನ್‌ಲೈನ್‌ನಲ್ಲಿ ಕೇಕ್ ಆರ್ಡರ್ ಮಾಡಿದ್ದೇ ಬಾಲಕಿಯ ಪ್ರಾಣಕ್ಕೆ ಕುತ್ತು ತಂದಿದ್ದು. ಹುಟ್ಟುಹಬ್ಬದ ವೇಳೆ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಕೇಕ್ ತಿಂದ ಬಾಲಕಿ ಮತ್ತು ಇಡೀ ಕುಟುಂಬದವರ ಆರೋಗ್ಯ ಹದಗೆಟ್ಟಿತ್ತು, ಬಾಲಕಿ ಮೃತಪಟ್ಟಿದ್ದಳು. ಇದೀಗ ಈ ಪ್ರಕರಣದಲ್ಲಿ ಬೆಳಕಿಗೆ ಬಂದಿರುವ ಹೊಸ ಸಂಗತಿಗಳು ಆಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿವೆ.
ವರದಿಯ ಪ್ರಕಾರ ಕೇಕ್‌ನಲ್ಲಿ ಹೆಚ್ಚಿನ ಪ್ರಮಾಣದ ಸ್ಯಾಕ್ರರಿನ್ ಇರುವುದು ಕಂಡುಬಂದಿದೆ. ಇದು ಸಿಹಿ ರುಚಿಯನ್ನು ನೀಡುವ ಸಿಂಥೆಟಿಕ್ ಸಂಯುಕ್ತವಾಗಿದೆ. ಸ್ಯಾಕ್ರರಿನ್ ಅನ್ನು ಸಾಮಾನ್ಯವಾಗಿ ಆಹಾರ ಪದಾರ್ಥಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಬಳಸಲಾಗುತ್ತದೆ, ಆದರೆ ಅದರ ಅತಿಯಾದ ಪ್ರಮಾಣವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತದೆ.
ಕೇಕ್‌ನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಯಲ್ಲಿ ಸ್ಯಾಕ್ರರಿನ್ ಅನ್ನು ಕೇಕ್ ತಯಾರಿಕೆಯಲ್ಲಿ ಬಳಸಿರುವುದು ದೃಢಪಟ್ಟಿದೆ. ಬೇಕರಿ ಮಾಲೀಕರ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ. ಈ ಘಟನೆಯ ನಂತರ ಫುಡ್ ಆರ್ಡರ್ ಮಾಡುವ ಆಪ್ ಝೊಮಾಟೊ ಬೇಕರಿ ಮಾಲೀಕರನ್ನು ಬ್ಯಾನ್ ಮಾಡಿದೆ ಮತ್ತು ಬೇಕರಿಯನ್ನು ತನ್ನ ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಿದೆ.
ಸ್ಯಾಕ್ರರಿನ್ ಎಂದರೇನು?
ಸ್ಯಾಕರಿನ್ ಒಂದು ಸಂಶ್ಲೇಷಿತ ಸಿಹಿಕಾರಕವಾಗಿದ್ದು, ಇದನ್ನು 1879 ರಲ್ಲಿ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವ ರಸಾಯನಶಾಸ್ತ್ರಜ್ಞ ಕಾನ್‌ಸ್ಟಾಂಟಿನ್ ಫಾಲ್ಬರ್ಗ್ ಕಂಡುಹಿಡಿದ. ಇದು ಸುಕ್ರೋಸ್ (ಟೇಬಲ್ ಶುಗರ್) ಗಿಂತ ಸುಮಾರು 300 ರಿಂದ 400 ಪಟ್ಟು ಸಿಹಿಯಾಗಿರುತ್ತದೆ, ಆದರೆ ಯಾವುದೇ ಕ್ಯಾಲೊರಿಗಳನ್ನು ಹೊಂದಿಲ್ಲ. ಅದಕ್ಕಾಗಿಯೇ ವಿವಿಧ ಆಹಾರಗಳು ಮತ್ತು ಪಾನೀಯಗಳಲ್ಲಿ ಸಕ್ಕರೆ ಬದಲಿಯಾಗಿ ಜನಪ್ರಿಯವಾಗಿದೆ. 20ನೇ ಶತಮಾನದ ಆರಂಭದಲ್ಲಿ ಸಕ್ಕರೆ ಕೊರತೆಯ ಸಮಯದಲ್ಲಿ ಸ್ಯಾಕ್ರರಿನ್ ಅನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು.
ಮೂತ್ರಕೋಶದ ಕ್ಯಾನ್ಸರ್‌ಗೆ ಕಾರಣವಾಗುತ್ತಾ ಸ್ಯಾಕರಿನ್?
ಅನೇಕ ದೇಶಗಳಲ್ಲಿ ಸ್ಯಾಕ್ರರಿನ್ ಅನ್ನು ಆಹಾರ ಸಂಯೋಜಕವಾಗಿ ಬಳಸಲು ಅನುಮೋದಿಸಲಾಗಿದೆ. ಆದರೆ ದೇಹದ ಮೇಲೆ ಅದರ ಸಂಭಾವ್ಯ ಹಾನಿಕಾರಕ ಪರಿಣಾಮಗಳ ಬಗ್ಗೆ ಕಳವಳವೂ ವ್ಯಕ್ತವಾಗಿದೆ. ಇದು ಮೂತ್ರಕೋಶದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಹೇಳಲಾಗ್ತಿದೆ. ಪ್ರಾಣಿಗಳ ಮೇಲೆ ನಡೆಸಿದ ಅಧ್ಯಯನಗಳಲ್ಲಿ ಇದು ದೃಢಪಟ್ಟಿದೆ.
ಹದಗೆಡುತ್ತದೆ ಜೀರ್ಣಾಂಗವ್ಯೂಹದ ಆರೋಗ್ಯ!
ಸ್ಯಾಕ್ರರಿನ್ ಕರುಳಿನ ಬ್ಯಾಕ್ಟೀರಿಯಾದ ಸಮತೋಲನವನ್ನು ಹಾಳು ಮಾಡುವುದರಿಂದ ಇದು ಜೀರ್ಣಕಾರಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡುತ್ತದೆ. ಸ್ಯಾಕ್ರರಿನ್‌ನಂತಹ ಸಂಶ್ಲೇಷಿತ ಸಿಹಿಕಾರಕಗಳು ಕರುಳಿನ ಮೈಕ್ರೋಬಯೋಟಾ ಸಂಯೋಜನೆಯನ್ನು ಬದಲಾಯಿಸಬಹುದು, ಬೊಜ್ಜು ಮತ್ತು ಇನ್ಸುಲಿನ್ ಪ್ರತಿರೋಧದಂತಹ ಚಯಾಪಚಯ ಅಸ್ವಸ್ಥತೆಗಳಿಗೆ ಕಾರಣವಾಗಬಹುದು.