ವಧು ತನ್ನ ಕೈಯಲ್ಲಿ ಮೆಹಂದಿಯೊಂದಿಗೆ ಮಂಟಪದಲ್ಲಿ ವರನಿಗಾಗಿ ಕಾಯುತ್ತಿದ್ದಳು. ಆದರೆ ವರ ಮಾತ್ರ ನಾಪತ್ತೆಯಾಗಿದ್ದ. ಪರೀಕ್ಷೆ ಮುಗಿದ ತಕ್ಷಣ ಮಂಟಪಕ್ಕೆ ತಲುಪಿದ ವರ ತನ್ನ ಬದುಕಿನ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾನೆ.
ಮಧ್ಯಪ್ರದೇಶದ ಛತ್ತರ್‌ಪುರದ ಕಲ್ಯಾಣ ಮಂಟಪದಲ್ಲಿ ಬುಂದೇಲ್ ಖಂಡ್ ಕುಟುಂಬದಿಂದ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿದ್ದು, ಅಲ್ಲಿ 11 ಜೋಡಿಗಳು ವಿವಾಹವಾದರು. ಆದರೆ ಆ ದಂಪತಿಗಳಲ್ಲಿ ಒಬ್ಬರ ಕಥೆ ತುಂಬಾ ಆಸಕ್ತಿದಾಯಕವಾಗಿತ್ತು. ವಧು ವರನಿಗಾಗಿ ಕಾಯುತ್ತಿದ್ದಳು. ಆದರೆ ವರ ಮಾತ್ರ ನಾಪತ್ತೆಯಾಗಿದ್ದ.
ವರ 10ನೇ ಪರೀಕ್ಷೆಗೆ ಹಾಜರಾಗಲು ಹೋಗಿದ್ದ ಕಾರಣ 3 ಗಂಟೆಗಳ ಬಳಿಕ ವರ ಮಂಟಪಕ್ಕೆ ತಲುಪಿದ್ದಾನೆ. ಪರೀಕ್ಷೆ ಮುಗಿದ ತಕ್ಷಣ ಮದುವೆ ಸ್ಥಳಕ್ಕೆ ಬಂದ ವರ ತನ್ನ ಬದುಕಿನ ಹೊಸ ಇನ್ನಿಂಗ್ಸ್ ಆರಂಭಿಸಿದ. ವರ್ಷವಿಡೀ ಪರೀಕ್ಷೆ ಬರೆಯಲು ತಯಾರಿ ನಡೆಸಿರುವುದಾಗಿ ವರ ರಾಮ್ ಜಿ ಸೇನ್ ತಿಳಿಸಿದ್ದಾನೆ. ಮದುವೆಗೂ ಮುನ್ನ ಈ ಪರೀಕ್ಷೆ ಅಗತ್ಯ ಎಂದು ಆತ ಅಭಿಪ್ರಾಯಪಟ್ಟಿದ್ದಾನೆ. ಇದರಿಂದ ಇಡೀ ವರ್ಷದ ಅಧ್ಯಯನವೇ ಹಾಳಾಗುತ್ತದೆ. ಹಾಗಾಗಿ ಮದುವೆಗೂ ಮುನ್ನ ಪರೀಕ್ಷೆ ಬರೆಯಲು ನಿರ್ಧರಿಸಿದ್ದಾನೆ. ಅದೇ ಸಮಯದಲ್ಲಿ, ವಧು ಪ್ರೀತಿ ಸೇನ್ ತನ್ನ ಭಾವಿ ಪತಿಯ ಈ ನಡವಳಿಕೆಯನ್ನು ಶ್ಲಾಘಿಸಿ ಅಧ್ಯಯನದ ಬಗ್ಗೆ ಅಂತಹ ಗಂಭೀರತೆ ತುಂಬಾ ಒಳ್ಳೆಯದು ಎಂದು ಹೇಳಿದ್ದಾಳೆ.
10ನೇ ತರಗತಿ ಸಮಾಜ ವಿಜ್ಞಾನ ಪರೀಕ್ಷೆ ಬರೆಯಲು ಹೋಗಿದ್ದೆ ಎಂದು ರಾಮ್‌ಜಿ ತಿಳಿಸಿದ್ದಾನೆ. ಮೂರು ಗಂಟೆಗಳ ಪರೀಕ್ಷೆ ನಂತರ ಮದುವೆಯ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ್ದಾನೆ. ಇಂದು ಬದುಕಿನ 2 ಪರೀಕ್ಷೆಗಳು ನಡೆದಿವೆ ಎಂದು ಹೇಳಿಕೊಂಡಿದ್ದಾನೆ.
ಒಂದು ಪರೀಕ್ಷೆ ಶಾಲೆಯದ್ದು ಮತ್ತು ಇನ್ನೊಂದು ಅವನ ಜೀವನದ ಪರೀಕ್ಷೆ. ಎರಡರಲ್ಲೂ ನಮಗೆ ಯಶಸ್ಸು ಖಂಡಿತ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದ್ದಾನೆ.