ಮದುವೆಯ ದಿನ ವಧು- ವರನಿಗೆ ಮಾತ್ರವಲ್ಲದೆ ಎರಡೂ ಕುಟುಂಬಗಳಿಗೂ ತುಂಬಾ ವಿಶೇಷವಾಗಿದೆ. ಆದರೆ ಈ ಸಂತೋಷದ ದಿನ ದುಃಸ್ವಪ್ನವಾಗಿ ಬದಲಾದಾಗ ಎಲ್ಲಾ ಆಸೆಗಳು ಧೂಳಿಪಟವಾಗುತ್ತವೆ. ಇಲ್ಲೊಬ್ಬಳು ನವವಧುವಿಗೆ ಇಂಥದ್ದೇ ಅನುಭವವಾಗಿದೆ. ಆಕೆಯ ಪತಿ ಮದುವೆಯ ದಿನವೇ ಇಂತಹ ಕೃತ್ಯವೊಂದನ್ನು ಎಸಗಿದ್ದಾನೆ. ಬೇಸತ್ತ ವಧು ಮದುವೆ ದಿನವೇ ಸಂಬಂಧ ಮುರಿದುಕೊಂಡು ವಿಚ್ಛೇದನ ಕೇಳಿದ್ದಾಳೆ.
ಸಾಮಾನ್ಯವಾಗಿ ರಿಸೆಪ್ಷನ್‌ನಲ್ಲಿ ಯುವ ಜೋಡಿಗಳು ಕೇಕ್ ಕಟ್ ಮಾಡುವ ಸಂಪ್ರದಾಯವಿದೆ. ಈ ಸಂದರ್ಭದಲ್ಲಿ ತನ್ನ ಮುಖಕ್ಕೆ ಅಪ್ಪಿತಪ್ಪಿಯೂ ಕೇಕ್ ಹಚ್ಚಬಾರದೆಂದು ವಧು, ವರನಿಗೆ ಷರತ್ತು ಹಾಕಿದ್ದಳು. ಇದಕ್ಕೆ ಆತನೂ ಒಪ್ಪಿದ್ದ. ಆದರೆ ಆತ ನುಡಿದಂತೆ ನಡೆಯಲೇ ಇಲ್ಲ. ವಧುವಿನ ಭಾವನೆಗಳನ್ನು ಗೌರವಿಸದೇ ಬಲವಂತವಾಗಿ ವಧುವಿನ ಮುಖವನ್ನು ಕೇಕ್‌ನಲ್ಲಿ ಅದ್ದಿಬಿಟ್ಟಿದ್ದಾನೆ. ಇದರಿಂದ ಮಾನಸಿಕವಾಗಿ ನೊಂದ ವಧು, ಪತಿಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾಳೆ.
ಆರತಕ್ಷತೆ ಸಮಯದಲ್ಲಿ ಮುಖಕ್ಕೆ ಕೇಕ್ ಹಚ್ಚಬಾರದು ಎಂದು ಆಕೆ ವಿನಂತಿ ಮಾಡಿಕೊಂಡಿದ್ದಳಂತೆ. ಆದರೆ ಅದನ್ನು ಮೀರಿ ವರ ಆಕೆಯ ಮುಖವನ್ನು ಕೇಕ್‌ನಲ್ಲಿ ಮುಳುಗಿಸಿಬಿಟ್ಟಿದ್ದಾನೆ. ಇದರಿಂದ ವಧುವಿಗೆ ಅಲರ್ಜಿಯೂ ಆಗಿತ್ತು. ಅಲರ್ಜಿ ಸಮಸ್ಯೆ ಬಗ್ಗೆ ತಿಳಿದಿದ್ದರೂ ವರ ಈ ರೀತಿ ನಡೆದುಕೊಂಡಿದ್ದಾನೆ. ವಧುವಿನ ತಲೆಯನ್ನು ಹಿಂದಿನಿಂದ ಹಿಡಿದು ಮುಖವನ್ನು ಕೇಕ್‌ನೊಳಗೆ ಅದ್ದಿದ್ದಾನೆ.
ಇದು ವಧುವಿಗೆ ತುಂಬಾ ಕೋಪ ತರಿಸಿದೆ ಮತ್ತು ಕಿರಿಕಿರಿಯನ್ನುಂಟುಮಾಡಿದೆ. ಬೇಸರಗೊಂಡ ವಧು ಆತನಿಂದ ವಿಚ್ಛೇದನ ಪಡೆಯುವುದಾಗಿ ಹೇಳಿದ್ದಾಳೆ. ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಎರಡೂ ಕುಟುಂಬದವರು ವಧುವಿನ ಮನವೊಲಿಸಲು ಪ್ರಯತ್ನಿಸಿದರು. ಆದರೆ ಭಾವನೆಗಳಿಗೆ ಗೌರವ ಕೊಡದ ಇಂಥವರ ಜೊತೆ ಬಾಳುವುದು ಅಸಾಧ್ಯವೆಂದುಕೊಂಡ ಆಕೆ, ಪತಿಗೆ ವಿಚ್ಛೇದನ ಪತ್ರ ಕಳಿಸಿದ್ದಾಳೆ.