ಬಾಯಿ ರುಚಿ ಬಯಸುತ್ತದೆ. ದೇಹಕ್ಕೆ ಇದು ಒಳ್ಳೆಯದಲ್ಲ ಎಂಬುದು ಗೊತ್ತಿದ್ದರೂ ಜನರು ರುಚಿ ಆಹಾರ ಸೇವನೆಗೆ ಮಹತ್ವ ನೀಡ್ತಾರೆ. ಇದೇ ಕಾರಣಕ್ಕೆ ಫಾಸ್ಟ್ ಫುಡ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಫಾಸ್ಟ್ ಫುಡ್ ಸೇವನೆ ಹೆಚ್ಚಾದಂತೆ ಜನರು ತರಕಾರಿಯಿಂದ ದೂರ ಸರಿಯುತ್ತಾರೆ. ತರಕಾರಿ ಸೇವನೆ ಕಡಿಮೆಯಾಗ್ತಿದ್ದಂತೆ ದೇಹ ನಿಮಗೆ ಸಂಕೇತ ನೀಡಲು ಶುರು ಮಾಡುತ್ತದೆ.
ದಣಿವು ಹೆಚ್ಚಾಗ್ತಿದ್ದಂತೆ ಕೆಲಸ ಹೆಚ್ಚಾಯ್ತು ಎಂದುಕೊಳ್ತೇವೆ. ಆದ್ರೆ ದಣಿವಿಗೆ ಕೆಲಸ ಮಾತ್ರ ಕಾರಣವಲ್ಲ. ದೇಹದಲ್ಲಿ ಫೋಲೇಟ್ ಕೊರತೆಯಾಗ್ತಿದ್ದಂತೆ ದಣಿವು ಹೆಚ್ಚಾಗುತ್ತದೆ. ಇದನ್ನು ಅರ್ಥ ಮಾಡಿಕೊಂಡು ನೀವು ಬೀನ್ಸ್, ಹಸಿರು ತರಕಾರಿ, ಸೊಪ್ಪು, ದ್ವಿದಳ ದಾನ್ಯಗಳ ಸೇವೆನೆಯನ್ನು ಹೆಚ್ಚು ಮಾಡಬೇಕು.
ಸ್ನಾಯು ಸೆಳೆತ ಕಾಣಿಸಿಕೊಳ್ತಿದ್ದರೆ ದೇಹದಲ್ಲಿ ಪೊಟ್ಯಾಸಿಯಮ್ ಕೊರತೆ ಇದೆ ಎಂದರ್ಥ. ಸ್ನಾಯು ಸೆಳೆತ ಕಾಣಿಸಿಕೊಳ್ಳುತ್ತಿದ್ದಂತೆ ಪಾಲಕ್, ಹಸಿರು ತರಕಾರಿ, ಸಿಹಿ ಆಲೂಗಡ್ಡೆ, ಬಾಳೆ ಹಣ್ಣಿನ ಸೇವನೆ ಶುರು ಮಾಡಿ.
ಆಗಾಗ ವಿಷ್ಯಗಳನ್ನು ಮರೆಯುತ್ತಿದ್ದರೆ ಮೆದುಳಿಗೆ ಸಂಕೇತ ನೀಡಲು ಅಗತ್ಯವಿರುವ ಪೋಷಕಾಂಶದ ಕೊರತೆಯಿದೆ ಎಂದರ್ಥ. ಮೆಕ್ಕೆಜೋಳ, ಟೋಮೋಟೋ, ಕ್ಯಾರೆಟ್, ಕೋಸು ಗಡ್ಡೆಯ ಸೇವನೆ ಮಾಡಿ. ಇದು ಲುಟೀನ್ ಕೊರತೆ ಕಡಿಮೆ ಮಾಡಿ ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ.
ಮಲಬದ್ಧತೆ ಸಮಸ್ಯೆ ಕಾಡ್ತಿದ್ದರೆ ದೇಹದಲ್ಲಿ ಫೈಬರ್ ಅಂಶ ಕಡಿಮೆಯಾಗಿದೆ ಎಂದರ್ಥ. ದ್ವಿದಳ ಧಾನ್ಯಗಳು, ಹಾಲು, ರಸಭರಿತ ಹಣ್ಣು, ಓಟ್ಸ್, ಬಾರ್ಲಿ, ಡ್ರೈ ಫ್ರೂಟ್ಸ್, ಬಟಾಣಿಯನ್ನು ಸೇವನೆ ಮಾಡಿ.