ಬಜಾಜ್ ಆಟೋ ತನ್ನ CNG ಚಾಲಿತ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಜೂನ್ 18ರಂದು ಈ ಬಜಾಜ್ ಸಿಎನ್‌ಜಿ ಬೈಕ್ ರಸ್ತೆಗಿಳಿಯಲಿದೆ. ಬಜಾಜ್ ಆಟೋ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಇದನ್ನು ಖಚಿತಪಡಿಸಿದ್ದಾರೆ. ಹೆಚ್ಚುತ್ತಿರುವ ಪೆಟ್ರೋಲ್ ಬೆಲೆಯನ್ನು ಗಮನದಲ್ಲಿಟ್ಟುಕೊಂಡು ಬಜಾಜ್ ಕಂಪನಿ CNG ಮೋಟಾರ್‌ಸೈಕಲ್ ಅನ್ನು ಲಾಂಚ್ ಮಾಡುತ್ತಿದೆ. ಇದು ವಿಶ್ವದ ಮೊದಲ ಸಿಎನ್‌ಜಿ ಮೋಟಾರ್‌ಸೈಕಲ್ ಎನಿಸಿಕೊಳ್ಳಲಿದೆ.
ಈ ಬೈಕ್‌ನ ಸಂಪೂರ್ಣ ವಿವರಗಳು ಇನ್ನೂ ಬಹಿರಂಗವಾಗಿಲ್ಲ. ಹ್ಯಾಲೊಜೆನ್ ಟರ್ನ್ ಇಂಡಿಕೇಟರ್‌ಗಳು, ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಸಸ್ಪೆನ್ಶನ್‌ಗಾಗಿ ಮೊನೊಶಾಕ್ ಘಟಕ ಹೀಗೆ ಅನೇಕ ವಿಶೇಷತೆಗಳು ಈ ಬೈಕ್‌ನಲ್ಲಿವೆ. ಇದು ಸಾಮಾನ್ಯ ಪ್ರಯಾಣಿಕ ಮೋಟಾರ್‌ಸೈಕಲ್‌ನಂತೆಯೇ ಕಾಣುತ್ತದೆ. ಮಲ್ಟಿ-ಸ್ಪೋಕ್ ಅಲಾಯ್ ಚಕ್ರಗಳು, ಉದ್ದವಾದ ಸಿಂಗಲ್-ಪೀಸ್ ಸೀಟ್, ಡಿಸ್ಕ್ ಮತ್ತು ಡ್ರಮ್ ಬ್ರೇಕಿಂಗ್ ಸಿಸ್ಟಮ್‌ನ ಸಂಯೋಜನೆಯೂ ಈ ಬೈಕ್‌ನಲ್ಲಿದೆ.
ಇದು ಬಜೆಟ್ ಶ್ರೇಣಿಯ ಪ್ರಯಾಣಿಕ ಮೋಟಾರ್‌ಸೈಕಲ್. ಕಂಪನಿಯು ಗ್ಲೈಡರ್, ಮ್ಯಾರಥಾನ್, ಟ್ರೆಕ್ಕರ್ ಮತ್ತು ಫ್ರೀಡಮ್‌ನಂತಹ ಹೆಸರುಗಳಿಗಾಗಿ ಟ್ರೇಡ್‌ಮಾರ್ಕ್ ಅರ್ಜಿಗಳನ್ನು ಸಲ್ಲಿಸಿದೆ. ಹಾಗಾಗಿ ಬೈಕ್ ಅನ್ನು ಇವುಗಳಲ್ಲಿ ಯಾವುದಾದರೊಂದು ಹೆಸರಿನೊಂದಿಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಎಂಜಿನ್ ವಿಶೇಷತೆಗಳ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಬಜಾಜ್ CNG ಬಳಸಲು, ಅಸ್ತಿತ್ವದಲ್ಲಿರುವ ಪೆಟ್ರೋಲ್ ಎಂಜಿನ್ ಅನ್ನು ಮಾರ್ಪಡಿಸಬಹುದು ಅಥವಾ ಸಂಪೂರ್ಣವಾಗಿ ಹೊಸ CNG ಎಂಜಿನ್ ಅನ್ನು ಅಭಿವೃದ್ಧಿಪಡಿಸಬಹುದು.