ಸಂಜೆ ಟೀ ಕುಡಿಯುವಾಗ ಏನಾದರೂ ಸ್ನ್ಯಾಕ್ಸ್ ಇದ್ದರೆ ತಿನ್ನುವ ಅನಿಸುತ್ತೆ. ಬೇಕರಿಯಿಂದ ತಂದು ತಿನ್ನುವ ಬದಲು ಮನೆಯಲ್ಲಿಯೇ ರುಚಿಕರವಾಗಿ ಏನಾದರೂ ಮಾಡಿಕೊಂಡು ತಿಂದರೆ ಆರೋಗ್ಯಕ್ಕೂ ಒಳ್ಳೆಯದು. ಸುಲಭವಾಗಿ ಈರುಳ್ಳಿ ಪಕೋಡ ಮಾಡುವ ವಿಧಾನದ ಕುರಿತು ಇಲ್ಲಿದೆ ನೋಡಿ ಮಾಹಿತಿ. ಮನೆಯಲ್ಲಿಯೇ ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಿರಿ.
ಬೇಕಾಗುವ ಸಾಮಾಗ್ರಿಗಳು-1 ಕಪ್ ಕಡಲೇ ಹಿಟ್ಟು, 2 ಟೇಬಲ್ ಸ್ಪೂನ್ ನಷ್ಟು ಅಕ್ಕಿ ಹಿಟ್ಟು, 4ದೊಡ್ಡ ಗಾತ್ರದ ಈರುಳ್ಳಿ ಉದ್ದಕ್ಕೆ ಸೀಳಿಕೊಳ್ಳಿ. ಇಂಗು ಚಿಟಿಕೆ, ಕರಿಬೇವು-10 ಎಸಳು, ಜೀರಿಗೆ-1/4 ಟೀ ಸ್ಪೂನ್, ಖಾರದ ಪುಡಿ-1 ಚಮಚ, ಉಪ್ಪು-ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಒಂದು ಬೌಲ್ ಗೆ ಈರುಳ್ಳಿ ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಕೈಯಾಡಿಸಿ. ಆಮೇಲೆ 1 ಟೀ ಸ್ಪೂನ್ ಬಿಸಿಯಾದ ಎಣ್ಣೆ ಹಾಕಿ ಮತ್ತೆ ಮಿಶ್ರಣ ಮಾಡಿ. ಇದಕ್ಕೆ ಜೀರಿಗೆ, ಖಾರದಪುಡಿ, ಅಕ್ಕಿ ಹಿಟ್ಟು, ಕರಿಬೇವು, ಚಿಟಿಕೆ ಇಂಗು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
ನಂತರ ಸ್ವಲ್ಪ ಸ್ವಲ್ಪ ಕಡಲೇಹಿಟ್ಟು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ನೀರು ಸೇರಿಸಬೇಡಿ. ನಂತರ ಕಾದ ಎಣ್ಣೆಗೆ ಸ್ವಲ್ಪ ಸ್ವಲ್ಪವೇ ಹಿಟ್ಟು ಹಾಕಿ ಕರಿಯಿರಿ. ರುಚಿಯಾದ ಈರುಳ್ಳಿ ಪಕೋಡ ಸವಿಯಲು ಸಿದ್ಧ.