
ಚಳಿಗಾಲದಲ್ಲಿ ಚರ್ಮದ ಸೌಂದರ್ಯ ಕಾಪಾಡಿಕೊಳ್ಳೋದು ಸವಾಲಿನ ಕೆಲಸ. ಚಳಿ ಹೆಚ್ಚಾದಂತೆ ಚರ್ಮ ಒಣಗಿದಂತಾಗಿ, ಬಿರುಕು ಬಿರುಕಾಗಬಹುದು. ಇದರಿಂದ ಮುಖದ ಮೇಲೆ ಮೊಡವೆಗಳೇಳುವುದು ಕೂಡ ಸಹಜ.
ನೀವು ತಿನ್ನುವ ಆಹಾರ, ಮುಖಕ್ಕೆ ಹಚ್ಚುವ ಸೌಂದರ್ಯ ವರ್ಧಕಗಳು ಕೂಡ ಮೊಡವೆಗಳಿಗೆ ಪ್ರಮುಖ ಕಾರಣ. ಹಾಗಾಗಿ ಚಳಿಗಾಲದಲ್ಲೂ ಚರ್ಮದ ಸೌಂದರ್ಯ ಕಾಪಾಡಿಕೊಳ್ಳುವುದರ ಜೊತೆಗೆ ಮೊಡವೆಗಳೇಳದಂತೆ ನಾವು ಕಾಪಾಡಿಕೊಳ್ಳಬಹುದು. ಅದಕ್ಕೆ ಪ್ರಮುಖವಾಗಿ 3 ಆಹಾರ ವಸ್ತುಗಳಿವೆ.
ಕಿಡ್ನಿ ಬೀನ್ಸ್: ಕಿಡ್ನಿ ಬೀನ್ಸ್ ಅಥವಾ ರಾಜ್ಮಾವನ್ನು ಚಳಿಗಾಲದಲ್ಲಿ ಸೇವನೆ ಮಾಡುವುದು ಉತ್ತಮ. ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳಲ್ಲೊಂದಾದ ಸತುವಿನ ಅಂಶ ಇದರಲ್ಲಿ ಹೆಚ್ಚಾಗಿದ್ದು, ಮೊಡವೆಗಳನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ.
ಚಿಯಾ ಅಥವಾ ಅಗಸೆ ಬೀಜ: ಇದು ಆರೋಗ್ಯಕ್ಕೆ ಉತ್ತಮವಾದುದು. ತೂಕ ಇಳಿಸಲು ಸಹಾಯ ಮಾಡುತ್ತದೆ. ಡಯಾಬಿಟಿಸ್ ನಿಂದ ಬಳಲುತ್ತಿರುವವರು ಸಹ ಅಗಸೆ ಬೀಜ ಸೇವನೆ ಮಾಡುವುದು ಒಳಿತು. ಇದರಲ್ಲಿ ಒಮೆಗಾ 3 ಫ್ಯಾಟಿ ಆ್ಯಸಿಡ್ಸ್ ಇರುವುದರಿಂದ ಚರ್ಮಕ್ಕೆ ಬೇಕಾದ ಪೋಷಕಾಂಶಗಳು ಸಿಗುತ್ತವೆ, ಪರಿಣಾಮ ಮೊಡವೆಗಳ ಸಮಸ್ಯೆಯಿಂದಲೂ ಮುಕ್ತಿ ಸಿಗುತ್ತದೆ.
ಕೊಬ್ಬಿನ ಅಂಶವಿರುವ ಮೀನು: ಸಾಲ್ಮನ್ ನಂತಹ ಕೊಬ್ಬಿನ ಅಂಶಗಳಿರುವ ಮೀನು ಸೇವನೆ ಮಾಡುವುದರಿಂದ ಚರ್ಮದ ಆರೋಗ್ಯ ಕಾಪಾಡಿಕೊಳ್ಳಬಹುದು. ಕೊಬ್ಬಿನ ಅಂಶವಿರುವ ಮೀನು ತಿನ್ನುವುದರಿಂದ ಮೊಡವೆಗಳು ಸಹ ಕಾಣಿಸಿಕೊಳ್ಳುವುದಿಲ್ಲ.