ಸ್ಥಳೀಯ ಭಾಷೆ ಕುರಿತ ವಾದ-ವಿವಾದಗಳು ಹೊಸದೇನಲ್ಲ. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡ್ತಿದೆ ಅನ್ನೋ ಆರೋಪವೂ ಇದೆ. ಬೇರೆ ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದವರು ಅವರದ್ದೇ ಭಾಷೆಯಲ್ಲಿ ಸ್ಥಳೀಯರೊಂದಿಗೆ ಸಂಭಾಷಿಸುತ್ತಾರೆ. ಎಷ್ಟೋ ಬಾರಿ ಇದೇ ವಿಚಾರಕ್ಕೆ ಜಗಳಗಳೂ ನಡೆಯುವುದುಂಟು.
ಇದೀಗ ಕರ್ನಾಟಕದಲ್ಲೂ ಮತ್ತದೇ ಭಾಷೆ ವಿಚಾರಕ್ಕೆ ಆಟೋ ಚಾಲಕ ಹಾಗೂ ಪ್ರಯಾಣಿಕರ ಮಧ್ಯೆ ಜಟಾಪಟಿ ನಡೆದಿದೆ. ಈ ವಿಡಿಯೋ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಕನ್ನಡ ಇಲ್ಲಿನ ಸ್ಥಳೀಯ ಭಾಷೆಯಾಗಿದ್ದು, ಕನ್ನಡದಲ್ಲೇ ಮಾತನಾಡಬೇಕೆಂದು ಆಟೋ ಚಾಲಕ ಯುವತಿಯೊಬ್ಬಳ ಮೇಲೆ ಹರಿಹಾಯ್ದಿದ್ದಾನೆ.
ಆದರೆ ಯುವತಿ ಅದಕ್ಕೆ ಸಮ್ಮತಿಸಿಲ್ಲ, ನಾನೇಕೆ ಕನ್ನಡದಲ್ಲಿ ಮಾತನಾಡಬೇಕೆಂದು ಜಗಳಕ್ಕಿಳಿದಿದ್ದಾಳೆ. ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಬೆಂಗಳೂರಲ್ಲಿ ಕನ್ನಡೇತರರಿಗೆ ತಾರತಮ್ಯ ಮಾಡಲಾಗುತ್ತಿದೆಯೇ ಎಂಬ ಸವಾಲುಗಳು ಮರುಜೀವ ಪಡೆದುಕೊಂಡಿವೆ. ಸಾರ್ವಜನಿಕ ವಾಹನಗಳಲ್ಲಿ ಸಂಚಾರ ಮಾಡುವುದು, ಸ್ಥಳೀಯರೊಂದಿಗೆ ಸಂಭಾಷಿಸುವುದು ಕನ್ನಡೇತರರಿಗೆ ಕಷ್ಟವಾಗುತ್ತಿದೆ ಎಂಬ ಚರ್ಚೆಗಳು ಕೂಡ ಶುರುವಾಗಿವೆ.
ಬೆಂಗಳೂರು ದೇಶದ ಪ್ರತಿಷ್ಠಿತ ನಗರಗಳಲ್ಲೊಂದು. ಟೆಕ್ ಹಬ್ ಎಂದೇ ಖ್ಯಾತಿಯಾಗಿರುವ ಸಿಟಿ. ಆದರೂ ಇಂತಹ ಕಾರಣಗಳಿಗೆ ಆಗಾಗ ವಿವಾದಗಳು ಭುಗಿಲೇಳುತ್ತಲೇ ಇರುತ್ತವೆ.