ಉತ್ತರ ಪ್ರದೇಶದ, ಮೀರತ್ ನ ಖೇಲೊ ಇಂಡಿಯಾ ಪ್ರದರ್ಶನ ಕೇಂದ್ರಕ್ಕೆ ಭೇಟಿ ಕೊಟ್ಟ ಪ್ರಧಾನಿ ನರೇಂದ್ರ ಮೋದಿ, ಅಲ್ಲಿದ್ದ ವ್ಯಾಯಾಮ ಸಲಕರಣೆಯನ್ನ ಟೆಸ್ಟ್ ಮಾಡಿದ್ದಾರೆ.
ವ್ಯಾಯಾಮ ಖುರ್ಚಿಯ ಮೇಲೆ ಕುಳಿತ ಪ್ರಧಾನಿ ಮೋದಿ ಅದನ್ನು ಬಳಸಿದ್ದಾರೆ. ಈ ಮೂಲಕ ಪ್ರಧಾನಿಯಾದರೂ ತಮ್ಮ ಸರಳತೆಯಿಂದ ಮತ್ತೆ ಜನರ ಮನಸ್ಸು ಗೆದ್ದಿದ್ದಾರೆ, ರಾಷ್ಟ್ರದಾದ್ಯಂತ ‘ಫಿಟ್ ಇಂಡಿಯಾ’ ಸಂದೇಶವನ್ನು ರವಾನಿಸಿದ್ದಾರೆ.
ಮೋದಿಯವರ ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿದ್ದು ಎಲ್ಲರಿಂದ ಶ್ಲಾಘನೆ ವ್ಯಕ್ತವಾಗಿದೆ. ಜೊತೆಗೆ ಪ್ರಧಾನಿಯವರನ್ನ ಭಾರತದ ಫಿಟ್ನೆಸ್ ರಾಯಭಾರಿ ಎಂದು ಕರೆಯಲಾಗುತ್ತಿದೆ.
ಭಾನುವಾರ ಉತ್ತರ ಪ್ರದೇಶದ ಮೀರತ್ ನಲ್ಲಿ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಮಾಡಿದ್ದಾರೆ. ಮೀರತ್‌ನ ಸರ್ಧಾನ ಪಟ್ಟಣದ ಸಲಾವಾ ಮತ್ತು ಕೈಲಿ ಗ್ರಾಮಗಳಲ್ಲಿ ಸುಮಾರು 700 ಕೋಟಿ ರೂಪಾಯಿ ವೆಚ್ಚದಲ್ಲಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಗುವುದು.
ಪ್ರಧಾನಮಂತ್ರಿ ಗಮನದ ಪ್ರಮುಖ ಕ್ಷೇತ್ರವೆಂದರೆ ಕ್ರೀಡಾ ಸಂಸ್ಕೃತಿಯನ್ನು ಬೆಳೆಸುವುದು ಮತ್ತು ಎಲ್ಲಾ ಭಾಗಗಳಲ್ಲಿ ವಿಶ್ವದರ್ಜೆಯ ಕ್ರೀಡಾ ಮೂಲ ಸೌಕರ್ಯವನ್ನು ಸ್ಥಾಪಿಸುವುದು ಅವರ ಕನಸು. ಆ ಕನಸಿನ ಒಂದು ಭಾಗ ಇಂದು ಪೂರ್ಣಗೊಂಡಿದೆ. 700 ಕೋಟಿ ರೂಪಾಯಿ ಮೌಲ್ಯದ ಈ ವಿಶ್ವವಿದ್ಯಾನಿಲಯವು ಯುವಕರಿಗೆ ಅಂತರಾಷ್ಟ್ರೀಯ ಕ್ರೀಡಾ ಸೌಲಭ್ಯಗಳನ್ನು ಒದಗಿಸುತ್ತದೆ.
ಪ್ರತಿ ವರ್ಷ 1000 ಕ್ಕೂ ಹೆಚ್ಚು ಹುಡುಗಿಯರು ಮತ್ತು ಹುಡುಗರು ಇಲ್ಲಿಂದ ಪದವಿ ಪಡೆಯುತ್ತಾರೆ. ಮೊದಲು, ಅಪರಾಧಿಗಳು ಮತ್ತು ಮಾಫಿಯಾ ಡಾನ್ ಗಳು, ಭೂಗಳ್ಳರು ಇಲ್ಲಿ ಪಂದ್ಯಾವಳಿಗಳನ್ನು ಆಡುತ್ತಿದ್ದರು, ಈಗ ನಿಜವಾಗಲು ಸೇರಬೇಕಾದವರಿಗೆ ಈ ಸೌಲಭ್ಯ ಸಿಗುತ್ತದೆ ಎಂದು ಪ್ರಧಾನಿ ಮೋದಿ ಶಂಕುಸ್ಥಾಪನೆಯ ನಂತರದ ಭಾಷಣದಲ್ಲಿ ಹೇಳಿದರು.
ಕ್ರೀಡಾ ವಿಶ್ವವಿದ್ಯಾಲಯವು ಸಿಂಥೆಟಿಕ್ ಹಾಕಿ ಮತ್ತು ಫುಟ್‌ಬಾಲ್ ಮೈದಾನಗಳು, ಬಾಸ್ಕೆಟ್‌ಬಾಲ್, ವಾಲಿಬಾಲ್, ಹ್ಯಾಂಡ್‌ಬಾಲ್, ಕಬಡ್ಡಿ ಮೈದಾನ, ಲಾನ್ ಟೆನಿಸ್ ಕೋರ್ಟ್ ಸೇರಿದಂತೆ ಆಧುನಿಕ ಮತ್ತು ಅತ್ಯಾಧುನಿಕ ಕ್ರೀಡಾ ಮೂಲಸೌಕರ್ಯಗಳನ್ನು ಹೊಂದಿದೆ. ಜಿಮ್ನಾಷಿಯಂ ಹಾಲ್, ಸಿಂಥೆಟಿಕ್ ರನ್ನಿಂಗ್ ಸ್ಟೇಡಿಯಂ, ಈಜುಕೊಳ, ಮತ್ತು ಸೈಕ್ಲಿಂಗ್ ವೆಲೋಡ್ರೋಮ್ ಇಲ್ಲಿರಲಿದೆ. ಶೂಟಿಂಗ್, ಸ್ಕ್ವಾಷ್, ಜಿಮ್ನಾಸ್ಟಿಕ್ಸ್, ವೇಟ್‌ಲಿಫ್ಟಿಂಗ್, ಬಿಲ್ಲುಗಾರಿಕೆ, ಕ್ಯಾನೋಯಿಂಗ್ ಮತ್ತು ಕಯಾಕಿಂಗ್‌ಗೆ ಸೌಲಭ್ಯಗಳನ್ನು ಈ ವಿವಿಯಲ್ಲಿ, ಸ್ಥಾಪಿಸಲಾಗುತ್ತದೆ.
ವಿಶ್ವವಿದ್ಯಾನಿಲಯವು 540 ಮಹಿಳೆಯರು ಮತ್ತು 540 ಪುರುಷ ಕ್ರೀಡಾಪಟುಗಳು ಸೇರಿದಂತೆ 1,080 ಕ್ರೀಡಾಪಟುಗಳಿಗೆ ತರಬೇತಿ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಸರ್ಕಾರಿ ಹೇಳಿಕೆಯಲ್ಲಿ ತಿಳಿಸಿದೆ.