ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿ ಯುವತಿಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಶೇಕಡ 50 ರಷ್ಟು ಸುಟ್ಟ ಗಾಯಗಳೊಂದಿಗೆ ಗಂಭೀರ ಸ್ಥಿತಿಯಲ್ಲಿರುವ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಖುರ್ಜಾ ಪೊಲೀಸ್ ಠಾಣೆ ಪ್ರದೇಶದ ಮುಂಡಖೇಡಾ ಗ್ರಾಮದಲ್ಲಿ ಘಟನೆ ನಡೆದಿದೆ. ಯುವತಿ ನೆರೆಮನೆಯ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಆಕೆಯ ಪ್ರೇಮಿಯ ಕಿರಿಯ ಸಹೋದರ ಪವನ್ ತನ್ನ ಮನೆಗೆ ಯುವತಿಯನ್ನು ಕರೆಸಿಕೊಂಡು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ನೆರೆಹೊರೆಯವರು ಬೆಂಕಿಯನ್ನು ನಂದಿಸಿ ಯುವತಿಯನ್ನು ರಕ್ಷಿಸಿದ್ದಾರೆ. ಘಟನೆಯ ನಂತರ ಆರೋಪಿ ಪವನ್ ಪರಾರಿಯಾಗಿದ್ದಾನೆ.
ಯುವತಿಯ ತಾಯಿ ಆರೋಪಿಸಿರುವಂತೆ, ಮಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದ್ದು, ಆಕೆಯ ಕಿರುಚಾಟ ಕೇಳಿದ ಸ್ಥಳೀಯರು ಬೆಂಕಿ ನಂದಿಸಿದ್ದಾರೆ. ಅಷ್ಟೊತ್ತಿಗಾಗಲೇ ಪವನ್ ಪರಾರಿಯಾಗಿದ್ದ ಎನ್ನಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ. ಹುಡುಗಿ ತನ್ನ ಹಳ್ಳಿಯ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು ಎಂದು ಎ.ಎಸ್.ಪಿ. ಸಂತೋಷ್ ಸಿಂಗ್ ತಿಳಿಸಿದ್ದಾರೆ.