
ಶನಿವಾರದಂದು ಬೆಂಗಳೂರು ಪೊಲೀಸರು ಹಾಸ್ಯನಟ ಮುನಾವರ್ ಫರೂಕಿ ಅವರ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಸಂಘಟಕರನ್ನು ಒತ್ತಾಯಿಸಿದ್ದಾರೆ. ಸಂಘಟಕರಿಗೆ ಬರೆದ ಪತ್ರದಲ್ಲಿ, ಹಲವಾರು ಸಂಘಟನೆಗಳು ಈ ಸ್ಟ್ಯಾಂಡ್-ಅಪ್ ಕಾಮಿಡಿ ಶೋ ಅನ್ನು ವಿರೋಧಿಸುತ್ತಿವೆ. ಇದರಿಂದ ಅವ್ಯವಸ್ಥೆ ಸೃಷ್ಟಿಯಾಗುತ್ತದೆ ಹಾಗೂ ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಬಹುದು. ಕಾನೂನು ಮತ್ತು ಸುವ್ಯವಸ್ಥೆಗೆ ಕೂಡ ಇದು ಕಾರಣವಾಗಬಹುದು ಎಂದು ಹೇಳಿದ್ದಾರೆ.
ಇದಲ್ಲದೆ, ಮುನಾವರ್ ಫರೂಕಿ ಅವರು ಇತರ ಧರ್ಮಗಳ ದೇವರುಗಳ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿರುವುದರಿಂದ ವಿವಾದಿತ ವ್ಯಕ್ತಿಯಾಗಿದ್ದಾರೆ ಎಂದು ಕೂಡ ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಭಾನುವಾರ ನಡೆಯಬೇಕಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
ಹಾಸ್ಯನಟ ಮುನಾವರ್ ಫರುಕಿ ಭಾನುವಾರ ತಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಿರುವ ಕುರಿತು ಪ್ರತಿಕ್ರಿಯಿಸಿದ್ದಾರೆ. 600 ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿರುವ ಭಾನುವಾರದ ಅವರ ಪ್ರದರ್ಶನವನ್ನು ಸ್ಥಳ ಧ್ವಂಸಗೊಳಿಸುವ ಬೆದರಿಕೆಯ ಮೇರೆಗೆ ರದ್ದುಪಡಿಸಲಾಗಿದೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮವನ್ನು ರದ್ದುಪಡಿಸಿದ್ದಕ್ಕಾಗಿ ಬೇಸರ ವ್ಯಕ್ತಪಡಿಸಿದ ಅವರು, ಇದು ಅನ್ಯಾಯ ಎಂದು ತಿಳಿಸಿದ್ದಾರೆ.
ಈ ಕಾರ್ಯಕ್ರಮವು ಭಾರತದ ಜನರಿಂದ ಅವರ ಧರ್ಮವನ್ನು ಲೆಕ್ಕಿಸದೆ ತುಂಬಾ ಪ್ರೀತಿಯನ್ನು ಗಳಿಸಿದೆ ಎಂದು ಹೇಳಿದ್ದಾರೆ. ಇದು ಅಂತ್ಯ ಎಂದು ತಾನು ಭಾವಿಸುತ್ತೇನೆ. ತನ್ನ ಕಾರ್ಯಕ್ರಮವನ್ನು ವೀಕ್ಷಿಸಿದ ನೀವುಗಳು ಅದ್ಭುತ ಪ್ರೇಕ್ಷಕರಾಗಿದ್ದೀರಿ. ಇಲ್ಲಿಗೆ ಮುಗಿಸುತ್ತಿದ್ದೇನೆ ಎಂದು ಅವರು ಬೇಸರದಿಂದ ನುಡಿದಿದ್ದಾರೆ.
ಈ ವರ್ಷದ ಆರಂಭದಲ್ಲಿ, ಮುನಾವರ್ ಫರುಕಿ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ ಹೇಳಿಕೆಗಳಿಗೆ ಕೆಲವು ಗುಂಪುಗಳು ಆಕ್ರೋಶ ವ್ಯಕ್ತಪಡಿಸಿತ್ತು. ಇದರಿಂದ ಅವರು ಒಂದು ತಿಂಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿರಬೇಕಾಯಿತು.