
ಮೂಗಿನ ಆಕಾರಕ್ಕೆ ತಕ್ಕ ಮೂಗುತಿ ಧರಿಸಿದರೆ ಸುಂದರ. ಚಿಕ್ಕ ಚಿಕ್ಕ ಒಂದೇ ಒಂದು ಹರಳಿನ ಮೂಗುತಿ, ನಕ್ಷತ್ರದಾಕಾರ, ಕಮಲಾಕಾರದ ಹೀಗೆ ಹತ್ತು ಹಲವು ಬಗೆಯಲ್ಲಿ ಮೂಗುತಿ ಲಭ್ಯ, ಹಾಗೆಯೇ ರಿಂಗ್ ತರಹದ ಮೂಗುತಿ ಧರಿಸುವುದು ಕೆಲವರಿಗೆ ಅಚ್ಚು ಮೆಚ್ಚು.
ಹಿಂದಿನ ಕಾಲದಲ್ಲಿ ಮಹಿಳೆಯರ ಮೂಗಿಗಿಂತ ಅವರು ಧರಿಸುತ್ತಿದ್ದ ಮೂಗುತಿಯ ಗಾತ್ರವೇ ದೊಡ್ಡದಾಗಿರುತ್ತಿತ್ತು. ಕಾಲ ಕಳೆದಂತೆ ಮಹಿಳೆಯರು ಚಿಕ್ಕ ಮೂಗುತಿ ಹಾಕಲು ಶುರು ಮಾಡಿದ್ದರು. ಇದೀಗ ಹಳೆಯ ದೊಡ್ಡ ದೊಡ್ಡ ಮೂಗುತಿಗಳೇ ಟ್ರೆಂಡ್ ಆಗುತ್ತಿವೆ.
ಇತ್ತೀಚಿಗೆ ಮೂಗುತಿಗೂ ಫ್ಯಾಷನ್ ಮೆರುಗು ಬಂದಿದೆ, ಮೂಗುತಿ ಧರಿಸುವುದು ಓಲ್ಡ್ ಫ್ಯಾಷನ್ ಎನ್ನುತಿದ್ದ ಹುಡುಗಿಯರೂ ಈಗ ಫ್ಯಾಷನಬಲ್ ಮೂಗುತಿ ಧರಿಸುವತ್ತ ಆಕರ್ಷಿತರಾಗುತ್ತಿದ್ದಾರೆ.