ಕಾಂಗ್ರೆಸ್ ಹಿರಿಯ ನಾಯಕ ಹಾಗೂ ತಿರುವನಂತಪುರಂ ಶಶಿ ತರೂರ್, ಕೋವಿಡ್ 19 ಲಸಿಕೆಯನ್ನ ಎಲ್ಲರಿಗೂ ಉಚಿತವಾಗಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕೋವಿಡ್ ಸೋಂಕಿನಿಂದ ಬಳಲುತ್ತಿರುವ ಸಂಸದ ಶಶಿ ತರೂರ್ 2 ನಿಮಿಷಗಳ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಈ ವಿಡಿಯೋ ಕೋವಿಡ್ ಅಸ್ವಸ್ಥನಾಗಿ ಹಾಸಿಗೆ ಹಿಡಿದಿರುವ ನನ್ನಿಂದ ಸಂದೇಶ ಎಂದು ಶೀರ್ಷಿಕೆ ನೀಡಿದ್ದಾರೆ.
ಈ ವಿಡಿಯೋದಲ್ಲಿ ಶಶಿ ತರೂರ್, ನೀವೆಲ್ಲ ನೋಡುತ್ತಿರುವಂತೆ ನಾನು ಹಾಸಿಗೆ ಹಿಡಿದಿದ್ದೇನೆ. ನಾನು ದೀರ್ಘಕಾಲದ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದೇನೆ. ನಾನು ನಿಮಗೆಲ್ಲ ಹೇಳೋದು ಇಷ್ಟೇ…..ಡಿಸೆಂಬರ್ ವೇಳೆಗೆ ಎಲ್ಲರಿಗೂ ಲಸಿಕೆ ನೀಡುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳುತ್ತಲೇ ಇದೆ. ಆದರೆ ದೇಶದಲ್ಲಿರುವ ಲಸಿಕೆ ಅಭಾವವನ್ನ ನೋಡುತ್ತಿದ್ದರೆ ಕೇಂದ್ರ ಸರ್ಕಾರ ಈ ಮಾತನ್ನ ಹೇಗೆ ಉಳಿಸಿಕೊಳ್ಳುತ್ತೆ ಅನ್ನೋದೇ ನನಗೆ ಆಶ್ಚರ್ಯಕರ ವಿಚಾರವಾಗಿದೆ ಎಂದು ತರೂರ್ ಹೇಳಿದ್ದಾರೆ.
ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಡಿಸೆಂಬರ್ ತಿಂಗಳ ಅಂತ್ಯದ ವೇಳೆಗೆ ದೇಶದ ಎಲ್ಲಾ ಜನತೆಗೆ ಕೊರೊನಾ ಲಸಿಕೆ ನೀಡೋದಾಗಿ ಹೇಳಿದ್ದರು. ಐಸಿಎಂಆರ್ ಮುಖ್ಯಸ್ಥ ಡಾ. ಬಲರಾಂ ಭಾರ್ಗವ ಕೂಡ ಇದೇ ಮಾತನ್ನ ಪುನರುಚ್ಛರಿಸಿದ್ದರು.
ದೇಶದಲ್ಲಿ ಕೊರೊನಾ ಲಸಿಕೆ ದರದ ವಿಚಾರದಲ್ಲಿ ತಾರತಮ್ಯವಿದೆ. ಈ ಲಸಿಕೆಗಳಿಗೆ ರಾಜ್ಯ ಸರ್ಕಾರ, ಖಾಸಗಿ ಆಸ್ಪತ್ರೆಗಳು ಹಾಗೂ ಇನ್ನಿತರ ಸಂಸ್ಥೆಗಳಿಂದ ಕೇಂದ್ರ ಸರ್ಕಾರ ದರ ನಿಗದಿ ಮಾಡಿದೆ. ಸೂಕ್ತ ಬೆಲೆಗೆ ಲಸಿಕೆಗಳನ್ನ ಕೇಂದ್ರ ಸರ್ಕಾರ ಖರೀದಿ ಮಾಡಿ ಜನರಿಗೆ ಹಂಚೋ ಬದಲು ಈ ರೀತಿಯ ಮಧ್ಯಸ್ಥಿಕೆ ಏಕೆ ಬೇಕು..? ಕೇಂದ್ರ ಸರ್ಕಾರ ಆರಂಭದಲ್ಲಿ ಉಚಿತ ಲಸಿಕೆ ಅಭಿಯಾನ ಎಂದು ಹೇಳಿತ್ತಲ್ಲವೇ..? ಎಂದು ಪ್ರಶ್ನೆ ಮಾಡಿದ್ದಾರೆ.
ದೇಶವನ್ನ ಕೊರೊನಾದಿಂದ ಪಾರಾಗಲು ಉಚಿತವಾಗಿ ಲಸಿಕೆಯನ್ನ ನೀಡಬೇಕಿದೆ. ನಾನು ಸಿಕ್ಕಾಪಟ್ಟೆ ನೋವು ಅನುಭವಿಸುತ್ತಿದ್ದೇನೆ. ನಾನು ಅನುಭವಿಸುತ್ತಿರೋದನ್ನ ನನ್ನ ದೇಶದ ಜನತೆ ಅನುಭವಿಸುವಂತೆ ಆಗಬಾರದು ಎಂದು ತರೂರ್ ಹೇಳಿದ್ದಾರೆ.