ಹುಡುಗನೊಂದಿಗಿನ ಸ್ನೇಹವನ್ನ ಪ್ರಶ್ನಿಸಿದ ತಾಯಿಯನ್ನು ಮಗಳೇ ಗೆಳೆಯನೊಂದಿಗೆ ಸೇರಿ ಹತ್ಯೆ ಮಾಡಿರೋ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಥಾಣೆಯ ಮುಂಬ್ರಾದ 17 ವರ್ಷದ ಹುಡುಗಿ ಮತ್ತು ಆಕೆಯ ಗೆಳೆಯ ತಮ್ಮ ಸ್ನೇಹವನ್ನು ವಿರೋಧಿಸಿದ ತಾಯಿಯನ್ನು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬುಧವಾರ ನಡೆದಿದ್ದು, ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳನ್ನು ಬಂಧಿಸುವ ಪ್ರಯತ್ನ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ಹುಡುಗನೊಂದಿಗಿನ ಸ್ನೇಹಕ್ಕಾಗಿ 37 ವರ್ಷದ ತಾಯಿ ಮಗಳನ್ನು ಖಂಡಿಸಿದ ನಂತರ ಹದಿಹರೆಯದ ಹುಡುಗಿ ಸಿಟ್ಟಾಗಿದ್ದಳು. ನಂತರ ಬಾಲಕಿ ಸಂಚು ರೂಪಿಸಿ ತನ್ನ ಪ್ರಿಯಕರನ ನೆರವಿನಿಂದ ತಾಯಿಗೆ ಚಾಕುವಿನಿಂದ ಬರ್ಬರವಾಗಿ ಇರಿದಿದ್ದಾಳೆ. ನಂತರ ಇಬ್ಬರು ಮನೆಗೆ ಹೊರಗಿನಿಂದ ಬೀಗ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಮುಂಬ್ರಾ ಪೊಲೀಸ್ ಠಾಣೆಯ ಹಿರಿಯ ಇನ್ಸ್ ಪೆಕ್ಟರ್ ಅಶೋಕ್ ಕಡ್ಲಗ್ ತಿಳಿಸಿದ್ದಾರೆ.
ನಂತರ, ಮೃತಳ ಸಂಬಂಧಿಯೊಬ್ಬರು ಆಕೆಗೆ ಕರೆ ಮಾಡಲು ಪ್ರಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸಂತ್ರಸ್ತೆಯ ಮನೆಗೆ ಧಾವಿಸಿ ಬಾಗಿಲು ಒಡೆದಾಗ ಸಂತ್ರಸ್ತೆ ರಕ್ತದ ಮಡುವಿನಲ್ಲಿ ಅನೇಕ ಇರಿತದ ಗಾಯಗಳೊಂದಿಗೆ ಪ್ರಾಣಬಿಟ್ಟಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಅವರನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.