ಮುಂಬೈ: ದೇಶದ ಹಲವೆಡೆ ಪೆಟ್ರೋಲ್ ಮತ್ತು ಡೀಸೆಲ್ ದರ ಶತಕ ಬಾರಿಸಿದ್ದು, ಹೀಗಿದ್ದರೂ ಒಂದು ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ನೀಡಲಾಗಿದೆ. ಕಡಿಮೆ ಬೆಲೆಗೆ ಪೆಟ್ರೋಲ್ ಪಡೆಯಲು ಜನ ಮುಗಿಬಿದ್ದ ಘಟನೆ ಮುಂಬೈನಲ್ಲಿ ನಡೆದಿದೆ.
ಮಹಾರಾಷ್ಟ್ರ ಪರಿಸರ ಖಾತೆ ಸಚಿವ ಆದಿತ್ಯ ಠಾಕ್ರೆ ಅವರ ಜನ್ಮದಿನದ ಅಂಗವಾಗಿ ಶಿವಸೇನೆ ಕಾರ್ಯಕರ್ತರು ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ. ಒಂದು ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ಮಾರಾಟ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದು, ಆದಿತ್ಯ ಠಾಕ್ರೆ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಲಾಗಿದೆ.
ಮಹಾರಾಷ್ಟ್ರದ ಥಾಣೆ ಡೊಂಬಿವಿಲಿಯಲ್ಲಿ ಸಾಂಕೇತಿಕ ಪ್ರತಿಭಟನೆಯ ಅಂಗವಾಗಿ 1200 ವಾಹನಗಳಿಗೆ ಒಂದು ರೂಪಾಯಿ ದರದಲ್ಲಿ ಪೆಟ್ರೋಲ್ ನೀಡಲಾಗಿದೆ. ಡೊಂಬಿವಿಲಿ ಉಸ್ಮಾ ಪೆಟ್ರೋಲ್ ಪಂಪ್‌ನಲ್ಲಿ ಒಂದು ರೂಪಾಯಿ ಪೆಟ್ರೋಲ್ ಖರೀದಿಗೆ ಜನ ಮುಗಿಬಿದ್ದಿದ್ದರು.
ಶಿವಸೇನೆ ಕಾರ್ಪೊರೇಟರ್ ದಿಪೇಶ್ ಮಾತ್ರೆ, ಪೂಜಾ ಮಾತ್ರೆ ಕಲ್ಯಾಣಿ, ಯುವಸೇನೆ ಪ್ರಮುಖರು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಒಂದು ರೂಪಾಯಿ ದರದಲ್ಲಿ ಪೆಟ್ರೋಲ್ ವಿತರಿಸಿದ್ದಾರೆ. ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಯನ್ನು ವಿರೋಧಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿರುವುದಾಗಿ ಮುಖಂಡರು ಹೇಳಿದ್ದಾರೆ. ಮುಂಬೈನಲ್ಲಿ ಒಂದು ಲೀಟರ್ ಪೆಟ್ರೋಲ್ ದರ 102 ರೂಪಾಯಿ ಇದೆ. ಹೀಗಿದ್ದರೂ 1 ರೂಪಾಯಿಗೆ ಪೆಟ್ರೋಲ್ ನೀಡುವ ಮೂಲಕ ಗಮನ ಸೆಳೆಯಲಾಗಿದೆ.