ಥಾಣೆ: ಮಹಾರಾಷ್ಟ್ರದ ಥಾಣೆಯ ಬದ್ಲಾಪುರ ಪ್ರದೇಶದಲ್ಲಿ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ತನ್ನ ಸ್ನೇಹಿತನನ್ನು ಕೊಂದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಜನವರಿ 11 ರಂದು ಸುಕಾಂತ್ ಪರಿದಾ(29) ಬದ್ಲಾಪುರ ಪ್ರದೇಶದ ಆರೋಪಿ ಮನೆಯಲ್ಲಿ ಸಾವಿನಪ್ಪಿದ್ದ. ಈ ಬಗ್ಗೆ ಪೊಲೀಸರಿಗೆ ಆರೋಪಿ ನರೇಶ್ ಶಂಬು ಭಗತ್(30) ಮಾಹಿತಿ ನೀಡಿದ್ದ. ಪೊಲೀಸರು ಶವವನ್ನು ಶವಪರೀಕ್ಷೆಗಾಗಿ ಆಸ್ಪತ್ರೆಗೆ ವರ್ಗಾಯಿಸಿದ್ದು, ಆರಂಭದಲ್ಲಿ ಉದ್ದೇಶಪೂರ್ವಕವಲ್ಲದ ಸಾವಿನ ಪ್ರಕರಣವನ್ನು ದಾಖಲಿಸಿದರು. ಪ್ರಕರಣದ ತನಿಖೆ ನಡೆಸುವಾಗ, ಪೊಲೀಸರು ವಿವಿಧ ಸುಳಿವುಗಳನ್ನು ಅನುಸರಿಸಿ ಭಗತ್ ಅವರನ್ನು ಅನುಮಾನದ ಮೇಲೆ ಬಂಧಿಸಿದ್ದಾರೆ.
ಸಂಪೂರ್ಣ ವಿಚಾರಣೆಯ ನಂತರ ಭಗತ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಮೃತ ವ್ಯಕ್ತಿಯು ಆಗಾಗ್ಗೆ ತನ್ನ ಮನೆಗೆ ಭೇಟಿ ನೀಡುತ್ತಿದ್ದ. ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದ, ಇದರಿಂದಾಗಿ ಜಗಳ ನಡೆಯುತ್ತಿತ್ತು ಎಂದು ಒಪ್ಪಿಕೊಂಡಿದ್ದಾನೆ.
ಸುಕಾಂತ್ ವರ್ತನೆಯಿಂದ ಬೇಸತ್ತ ಆರೋಪಿ ಅವನನ್ನು ಕೊಲೆ ಮಾಡಲು ಸಂಚು ರೂಪಿಸಿ ಜನವರಿ 10 ರ ರಾತ್ರಿ ತನ್ನ ಮನೆಗೆ ಆಹ್ವಾನಿಸಿ, ಅವನಿಗೆ ಮದ್ಯ ಕುಡಿಸಿದ್ದಾನೆ. ನಂತರ ಸುತ್ತಿಗೆ ಮತ್ತು ಕಬ್ಬಿಣದ ರಾಡ್ನಿಂದ ಅವನ ತಲೆಗೆ ಹೊಡೆದಿದ್ದು, ಸುಕಾಂತ್ ಸಾವನ್ನಪ್ಪಿದ್ದಾನೆ. ತನಿಖೆ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.