ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರೆದಿದೆ. ಅಧಿಕಾರ ಉಳಿಸಿಕೊಳ್ಳಲು ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಾಡಿ ಸರ್ಕಾರ ಪ್ರಯತ್ನಗಳು ಮುಂದುವರೆದಿವೆ.
ಶಿವಸೇನೆ ಕಾರ್ಯಕರ್ತರು ಬಂಡಾಯ ಶಾಸಕರ ಕಚೇರಿಗಳ ಮೇಲೆ ಆಕ್ರಮಣ ಮಾಡತೊಡಗಿದ್ದಾರೆ. ಶಿವಸೇನೆಯ ಹೆಚ್ಚಿನ ಶಾಸಕರು ಉದ್ಧವ್ ಠಾಕ್ರೆಯಿಂದ ದೂರವಾಗಿ ಶಿಂಧೆ ಕ್ಯಾಂಪ್ ಸೇರಿಕೊಂಡಿದ್ದಾರೆ. ಈಗ ಪಕ್ಷದ ಪದಾಧಿಕಾರಿಗಳು ಕೂಡ ಶಿವಸೇನೆಯಿಂದ ದೂರ ಸರಿಯತೊಡಗಿದ್ದಾರೆ.
ಥಾಣೆ ಜಿಲ್ಲೆಯ ಶಿವಸೇನೆ ಅಧ್ಯಕ್ಷ ನರೇಶ್ ರಾಜೀನಾಮೆ ನೀಡಿದ್ದಾರೆ. ಬಂಡಾಯ ಶಾಸಕರ ಗುಂಪಿನ ನಾಯಕ ಏಕನಾಥ ಶಿಂಧೆ ಅವರ ಬೆಂಬಲಿಗರಾಗಿರುವ ನರೇಶ್ ಅವರು ಶಿವಸೇನೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮತ್ತೊಂದು ಹಂತ ತಲುಪಿದೆ. ಜನಪ್ರತಿನಿಧಿಗಳ ಬಳಿಕ ಪಕ್ಷದ ಪ್ರಮುಖ ಪದಾಧಿಕಾರಿಗಳು ಕೂಡ ಶಿವಸೇನೆಯಿಂದ ದೂರವಾಗುತ್ತಿದ್ದಾರೆ.