
ಮಹಾರಾಷ್ಟ್ರದ ಥಾಣೆಯಲ್ಲಿ ಬಾಲಕಿ ತನ್ನ ಶಾಲೆಯ ಗೇಟ್ ಮೇಲೆ ಆಟವಾಡುತ್ತಿದ್ದಾಗ ಅವಘಡ ಸಂಭವಿಸಿತು. ಇದ್ದಕ್ಕಿದ್ದಂತೆ ಕಬ್ಬಿಣದ ಗೇಟ್ ಸಡಿಲಗೊಂಡು ಅದರ ಒಂದು ಭಾಗವು ಆಕೆಯ ಕೆನ್ನೆಯ ಮೂಲಕ ಚುಚ್ಚಿಕೊಂಡಿತು.
ಅದೇ ಪ್ರದೇಶದಲ್ಲಿದ್ದ ಅಮೆಜಾನ್ ಡೆಲಿವರಿ ಬಾಯ್ ಅಪಘಾತವನ್ನು ನೋಡಿ, ಬಾಲಕಿಗೆ ಸಹಾಯ ಮಾಡಲು ಧಾವಿಸಿದರು. ರಕ್ತಸ್ರಾವವನ್ನು ನಿಲ್ಲಿಸಲು, ಗಾಯ ಉಲ್ಬಣಗೊಳಿಸುವುದನ್ನು ನಿಲ್ಲಿಸಲು ಲೋಹದ ತುಂಡನ್ನು ಹಿಡಿದಿದ್ದರು. ವೈದ್ಯರು ಆಗಮಿಸುವ ವರೆಗೂ ಇದೇ ಸಾಹಸ ಮಾಡಿದ್ದರು.
ಸಮೀಪದ ವಸಂತ ವಿಹಾರ್ ಆಸ್ಪತ್ರೆಯ ವೈದ್ಯರು ಮತ್ತು ನರ್ಸ್ ಸಹಾಯಕ್ಕಾಗಿ ಧಾವಿಸಿದರು. ಗೇಟ್‌ನ ಒಂದು ಭಾಗ ಕತ್ತರಿಸಿ ಆಕೆಯನ್ನು ರಕ್ಷಿಸಲು ನೆರವಾದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಡೆಲಿವರಿ ಬಾಯ್ ರವಿ ಅವರ ಫೋಟೋವನ್ನು ಜಾಲತಾಣದಲ್ಲಿ ಹಂಚಿಕೊಂಡ ಸಾಲುಂಕೆ ಎಂಬುವರು, ವಿದ್ಯಾರ್ಥಿನಿಯನ್ನು ರಕ್ಷಿಸಿದ ರವಿಯವರ ಸಮಯೋಚಿತ ಸಹಾಯವನ್ನು ಗುರುತಿಸುವಂತೆ ಕೇಳಿಕೊಂಡರು. ಯಾರಾದರೂ ಅವರ ಪ್ರಯತ್ನಗಳನ್ನು ಶ್ಲಾಘಿಸಲು ಬಯಸಿದರೆ ಸಂಪರ್ಕಿಸಬಹುದೆಂದು ರವಿಯವರ ಫೋನ್ ಸಂಖ್ಯೆಯನ್ನು ಸಹ ಹಂಚಿಕೊಂಡಿದ್ದಾರೆ.
ಅನೇಕರು ರವಿ ವೈಯಕ್ತಿಕ ಮೊಬೈಲ್ ಸಂಖ್ಯೆಗೆ ಕರೆಮಾಡಿ ಧನ್ಯವಾದ ಅರ್ಪಿಸಿದರು. ಕೆಲವರು ಸಣ್ಣ ಮೊತ್ತವನ್ನು ದೇಣಿಗೆ ನೀಡಿದರು.