ಬ್ಯಾಂಕಾಕ್(ಥಾಯ್ಲೆಂಡ್): ಲೈಂಗಿಕ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಲೈಂಗಿಕ ಅಪರಾಧಿಗಳಿಗೆ ಸ್ವಯಂಪ್ರೇರಿತ ರಾಸಾಯನಿಕ ಕ್ಯಾಸ್ಟ್ರೇಶನ್ ಅನುಮತಿಸುವ ಮಸೂದೆಯನ್ನು ಥೈಲ್ಯಾಂಡ್ ಮಂಗಳವಾರ ಅಂಗೀಕರಿಸಿದೆ(voluntary chemical castration of sex offenders).
ಥಾಯ್ ಸೆನೆಟ್ ನಲ್ಲಿ ಈ ಮಸೂದೆ ಅಂಗೀಕರಿಸಿದ್ದು, ಪುನರಾವರ್ತಿತ ಲೈಂಗಿಕ ಅಪರಾಧಿಗಳ ಸ್ವಯಂಪ್ರೇರಿತ ರಾಸಾಯನಿಕ ಕ್ಯಾಸ್ಟ್ರೇಶನ್ ಅನುಮತಿಸಲಾಗಿದೆ ಎಂದು ಬ್ಯಾಂಕಾಕ್ ಪೋಸ್ಟ್ ವರದಿ ಮಾಡಿದೆ.
ಮಸೂದೆಯ ಅಡಿಯಲ್ಲಿ ಮನೋವೈದ್ಯಕೀಯ ತಜ್ಞರು ಮತ್ತು ಆಂತರಿಕ ಔಷಧ ತಜ್ಞರ ಅನುಮೋದನೆಯೊಂದಿಗೆ ಮತ್ತು ಲೈಂಗಿಕ ಅಪರಾಧಿಯ ಒಪ್ಪಿಗೆಯೊಂದಿಗೆ ಮಾತ್ರ ಔಷಧಿಗಳನ್ನು ಶಿಫಾರಸು ಮಾಡಬಹುದು.
ತಮ್ಮ ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡುವ ಚಿಕಿತ್ಸೆ, ಚುಚ್ಚುಮದ್ದುಗಳನ್ನು ಸ್ವೀಕರಿಸಲು ಒಪ್ಪುವ ಅಪರಾಧಿಗಳಿಗೆ ಪ್ರತಿಯಾಗಿ ಅವರ ಜೈಲು ಅವಧಿಯನ್ನು ಮೊಟಕುಗೊಳಿಸಲಾಗುವುದು.
‘ಹಿಂಸಾಚಾರ-ಸಂಬಂಧಿತ ಮರು ಅಪರಾಧ ತಡೆಗಟ್ಟುವಿಕೆ ಮಸೂದೆ’ ಬಗ್ಗೆ ನ್ಯಾಯ ಸಚಿವಾಲಯ ಪ್ರಸ್ತಾಪಿಸಿದೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ಈಗಾಗಲೇ ವಿಸ್ತೃತ ಚರ್ಚೆ ಕೂಡ ನಡೆದಿದೆ. ಸಂಸದರಿಂದ ಭಾರೀ ಬೆಂಬಲದೊಂದಿಗೆ ಲೈಂಗಿಕ ಅಪರಾಧಗಳಿಗೆ ಹೆಚ್ಚು ದಂಡನಾತ್ಮಕ ವಿಧಾನವನ್ನು ಸೆನೆಟ್ ಅಂಗೀಕರಿಸಿದೆ.
ಪುನರಾವರ್ತಿತ ಮತ್ತು ಹಿಂಸಾತ್ಮಕ ಲೈಂಗಿಕ ಅಪರಾಧಿಗಳಿಗೆ ಅನ್ವಯಿಸುವ ಮಸೂದೆಯನ್ನು ಸೆನೆಟ್ ಸರ್ವಾನುಮತದಿಂದ ಅಂಗೀಕರಿಸಿದೆ. ಆರೋಗ್ಯ ಅಧಿಕಾರಿಗಳು ಕಾರ್ಯವಿಧಾನಗಳನ್ನು ನಿರ್ಧರಿಸುತ್ತಾರೆ. ಕ್ಯಾಬಿನೆಟ್ ನಿರ್ಧರಿಸುವ ದಿನಾಂಕದಂದು ರಾಯಲ್ ಗೆಜೆಟ್‌ನಲ್ಲಿ ಪ್ರಕಟಿಸಿದಾಗ ಮಸೂದೆ ಕಾನೂನಾಗಲಿದೆ.
ಕೆಮಿಕಲ್ ಕ್ಯಾಸ್ಟ್ರೇಶನ್ ಶಿಕ್ಷೆಯ ಹೊಸ ರೂಪವಲ್ಲ. ಇದನ್ನು ದಕ್ಷಿಣ ಕೊರಿಯಾ, ಪಾಕಿಸ್ತಾನ, ಪೋಲೆಂಡ್ ಮತ್ತು US ನಲ್ಲಿ ಕನಿಷ್ಠ ಎಂಟು ರಾಜ್ಯಗಳಲ್ಲಿ ಬಳಸಲಾಗಿದೆ. ನಾರ್ವೆ, ಡೆನ್ಮಾರ್ಕ್ ಮತ್ತು ಜರ್ಮನಿ ಸೇರಿದಂತೆ ಹಲವು ದೇಶಗಳು ಕೂಡ ಗಂಭೀರ ಲೈಂಗಿಕ ಅಪರಾಧಿಗಳ ಶಸ್ತ್ರಚಿಕಿತ್ಸೆಯ ಕ್ಯಾಸ್ಟ್ರೇಶನ್ ಆರಿಸಿಕೊಂಡಿವೆ.
ಆದಾಗ್ಯೂ, ಕ್ಯಾಸ್ಟ್ರೇಶನ್ ಪ್ರಕ್ರಿಯೆ ಮಾನವ ಹಕ್ಕುಗಳ ಉಲ್ಲಂಘನೆಯ ಎಂಬ ವಾದಗಳೂ ಇವೆ. ಕ್ಯಾಸ್ಟ್ರೇಶನ್ ಲೈಂಗಿಕತೆಯನ್ನು ನಿಲ್ಲಿಸುತ್ತದೆ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕ್ಯಾಸ್ಟ್ರೇಟೆಡ್ ವ್ಯಕ್ತಿಯು ಹೆಚ್ಚು ಹಿಂಸಾತ್ಮಕವಾಗಬಹುದು. ಕ್ಯಾಸ್ಟ್ರೇಟೆಡ್ ವ್ಯಕ್ತಿಯು ಹುಡುಗಿಯರನ್ನು ದ್ವೇಷಿಸಲು ಪ್ರಾರಂಭಿಸಬಹುದು. ವಿಪರೀತ ಕೋಪದ ಕಾರಣದಿಂದ ಹುಡುಗಿಯರಿಗೆ ಹಾನಿ ಮಾಡಬಹುದು. ಇದಲ್ಲದೆ, ಅತ್ಯಾಚಾರ, ಲೈಂಗಿಕ ದೌರ್ಜನ್ಯ ಹಿಂಸೆಯ ಏಕೈಕ ಮಾರ್ಗವಲ್ಲ. ಹುಡುಗಿಯರ ಮೇಲೆ ದೌರ್ಜನ್ಯವನ್ನು ಪ್ರದರ್ಶಿಸುವವರು ಹಿಂಸೆಯ ಇತರ ಮಾರ್ಗಗಳನ್ನು ಬಳಸಬಹುದು ಎನ್ನಲಾಗಿದೆ.
ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ತಡೆಗೆ ಕಟ್ಟುನಿಟ್ಟಾದ ಶಿಕ್ಷೆ ಅಗತ್ಯವಿದೆ. ಕ್ಯಾಸ್ಟ್ರೇಶನ್ ಭಯ ಸಮಾಜದಲ್ಲಿ ಅಪರಾಧದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇಂತಹ ಅಪರಾಧ ಮಾಡುವ ಮುನ್ನ ಜನರು ಎರಡು ಬಾರಿ ಯೋಚಿಸುತ್ತಾರೆ ಎಂದು ಹೇಳಲಾಗಿದೆ.