ಥಾಯ್ ಏರ್‌ವೇಸ್‌ನ ವಿಮಾನವು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವ ಮೊದಲು ಟೈರ್ ಸ್ಫೋಟಗೊಂಡಿದ್ದು, ಭಾರಿ ಅವಘಡವೊಂದು ಸಂಭವಿಸುವ ಸಾಧ್ಯತೆ ಇತ್ತು. ಆದರೆ, ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ವಿಮಾನದಲ್ಲಿದ್ದ 150 ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆ ವಿಮಾನ ಇಳಿಯುವ ಮೊದಲು ಟೈರ್ ಸ್ಫೋಟಗೊಂಡಿತ್ತು. ಮಂಗಳವಾರ (ಏಪ್ರಿಲ್ 26) ರಾತ್ರಿ ಈ ಘಟನೆ ನಡೆದಿದೆ.
ವಿಮಾನದಲ್ಲಿದ್ದ ಜನರನ್ನು ಇಳಿಸಿದ ನಂತರ, ವಿಮಾನವನ್ನು ತಪಾಸಣೆಗೆ ಕರೆದೊಯ್ಯಲಾಯಿತು.
ಬುಧವಾರ ಬೆಂಗಳೂರಿನಿಂದ ಬ್ಯಾಂಕಾಕ್‌ಗೆ ವಿಮಾನ ಟೇಕ್ ಆಫ್ ಆಗಬೇಕಿತ್ತು. ಆದರೆ ಘಟನೆಯ ನಂತರ ಪ್ರಯಾಣವನ್ನು ರದ್ದುಗೊಳಿಸಲಾಯಿತು. ಬುಧವಾರ ಸಂಜೆ ಏರ್‌ಲೈನ್ಸ್‌ನ ತಾಂತ್ರಿಕ ತಂಡ ಸ್ಪೇರ್ ವೀಲ್ ನೊಂದಿಗೆ ಆಗಮಿಸಿದ್ದು, ವಿಮಾನವು ಏಪ್ರಿಲ್ 28 ರಂದು ಬೆಂಗಳೂರಿನಿಂದ ಬ್ಯಾಂಕಾಕ್‌ಗೆ ಹಾರಿತು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
256 ಆಸನಗಳ ವಿಮಾನ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಬ್ಯಾಂಕಾಕ್‌ನಿಂದ ಹೊರಟು ರಾತ್ರಿ 11.32ಕ್ಕೆ ಬೆಂಗಳೂರಿಗೆ ಬಂದಿಳಿಯುವಾಗ ಈ ಘಟನೆ ನಡೆದಿದ್ದು, ವಿಮಾನವು ಸುರಕ್ಷಿತವಾಗಿ ಟಾರ್ಮ್ಯಾಕ್‌ನಲ್ಲಿ ಇಳಿಯಿತು.
ಗಾಳಿಯಲ್ಲಿ ಸ್ಫೋಟ ಸಂಭವಿಸಿದ್ದು ಪೈಲಟ್‌ಗಳ ಗಮನಕ್ಕೆ ಬಂದಿದೆ ಎಂದು ತಜ್ಞರು ಹೇಳಿದ್ದಾರೆ. ಪ್ರಯಾಣಿಕರು ಮತ್ತು ಸಿಬ್ಬಂದಿ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ ಎಂದು ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಹೇಳಿದ್ದಾರೆ.