ಬೆಂಗಳೂರು : ಮುಂದಿನ ವರ್ಷ ಮತ್ತೆ ರಾಜ್ಯದ ಶಾಲಾ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಶಾಲಾ ಮಕ್ಕಳ ಪಠ್ಯಪುಸ್ತಕ ಪರಿಷ್ಕರಣೆ ಮಾಡುತ್ತೇವೆ. ಪಠ್ಯ ಪುಸ್ತಕದಲ್ಲಿ ಧಾರ್ಮಿಕತೆ ಹಾಗೂ ರಾಜಕೀಯ ಇರಬಾರದು. ಪಠ್ಯದಲ್ಲಿನ ಐಡಿಯಾಲಜಿ ಎಲ್ಲವನ್ನೂ ನಾವು ತೆಗೆದು ಹಾಕಿದ್ದೇವೆ. ಮುಂದಿನ ಶೈಕ್ಷಣಿಕ ವರ್ಷವೂ ನಾವು ಪಠ್ಯಪುಸ್ತಕ ಪರಿಷ್ಕರಣೆ ಮಾಡುತ್ತೇವೆ. ಪಠ್ಯದಲ್ಲಿ ಅನೇಕ ಬದಲಾವಣೆ ಮಾಡುತ್ತೇವೆ.
ಶಾಲೆಗಳಲ್ಲಿ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ ಕೊಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಬಳಿ ಮನವಿ ಮಾಡಿಕೊಂಡಿದ್ದೆ. ನನ್ನ ಮನವಿಯನ್ನು ಅನುಮೋದಿಸಿದ ಸಿದ್ದರಾಮಯ್ಯ ಅವರು, ವಾರದಲ್ಲಿ 2 ದಿನ ಮಕ್ಕಳಿಗೆ ಮೊಟ್ಟೆ ನೀಡಲು ಅನುಮೋದನೆ ನೀಡಿದ್ದಾರೆ. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು, ಶೇಂಗಾ ಚಿಕ್ಕಿ ಕೊಡುತ್ತೇವೆ ಎಂದು ಹೇಳಿದ್ದಾರೆ.
ನಾನು ಅಧಿಕಾರಕ್ಕೆ ಬಂದಾಗ ನನ್ನ ಕ್ಷೇತ್ರದಲ್ಲಿ ಶಿಕ್ಷಕರು ಇರಲಿಲ್ಲ. ಸೊರಬ ಕ್ಷೇತ್ರದಲ್ಲಿ 52 ಶಾಲೆಗಳಲ್ಲಿ ಶಿಕ್ಷಕರೇ ಇರಲಿಲ್ಲ.ಎಷ್ಟೋ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ. ಮುಂದಿನ 8 ತಿಂಗಳಲ್ಲಿ ಕೆಲವೊಂದು ಪ್ಲಾನ್ ಮಾಡಿಕೊಂಡಿದ್ದೇನೆ.ವ್ಯವಸ್ಥೆ ಯಾವ ತರಹ ನಡೆಯುತ್ತೆ ಅಂತ ತಿಳಿದುಕೊಳ್ಳಬೇಕು ಎಂದರು.