ಬೆಂಗಳೂರು: ಶಾಲಾ ಮಕ್ಕಳು, ಪೋಷಕರಿಗೆ ಖುಷಿಯ ವಿಚಾರ ಇಲ್ಲಿದೆ. ಮೇ 29 ರಂದು ಶಾಲೆ ಆರಂಭದ ದಿನವೇ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಶಾಲೆ ಆರಂಭವಾಗಿ ನಾಲ್ಕೈದು ತಿಂಗಳು ಕಳೆದರೂ ಮಕ್ಕಳಿಗೆ ಪಠ್ಯಪುಸ್ತಕ ಸಿಗದೇ ತೊಂದರೆಯಾಗಿತ್ತು. ಶಿಕ್ಷಣ ಇಲಾಖೆಗೂ ಮುಜುಗರಕ್ಕೀಡಾಗಿತ್ತು. ಈ ಬಾರಿ ಶಿಕ್ಷಣ ಇಲಾಖೆ ಶಾಲೆ ಆರಂಭದ ಸಂದರ್ಭದಲ್ಲಿಯೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.
ಕರ್ನಾಟಕ ಪಠ್ಯಪುಸ್ತಕಗಳ ಸಂಘ ಪಠ್ಯಪುಸ್ತಕ ಮುದ್ರಣ ಮತ್ತು ಹಂಚಿಕೆ ಮಾಡಲಿದ್ದು, ಈಗಾಗಲೇ ಬಿಇಒ ಕಚೇರಿಗಳಿಗೆ ಶೇಕಡ 86 ರಷ್ಟು ಪಠ್ಯಪುಸ್ತಕಗಳನ್ನು ಪೂರೈಕೆ ಮಾಡಿದೆ. ಏಪ್ರಿಲ್ ಅಂತ್ಯಕ್ಕೆ ಸಂಪೂರ್ಣ ಸರಬರಾಜು ಆಗಲಿದ್ದು, ಮೇ 29ಕ್ಕೆ ಶಾಲೆ ಆರಂಭದ ದಿನವೇ ಮಕ್ಕಳಿಗೆ ಪಠ್ಯಪುಸ್ತಕ ನೀಡಲಾಗುತ್ತದೆ. 2023 -24ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆಗಳು ಮೇ 29 ರಿಂದ ಆರಂಭವಾಗಲಿವೆ.
47,511 ಸರ್ಕಾರಿ, 6,500 ಖಾಸಗಿ, 18,123 ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ 58.15 ಲಕ್ಷ ವಿದ್ಯಾರ್ಥಿಗಳಿಗೆ ಶಾಲೆ ಆರಂಭದ ದಿನವೇ ಪಠ್ಯಪುಸ್ತಕ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.